ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಇನ್‍ಸ್ಪೈರ್ ಎಸ್ ಆರ್ ಎಸ್ ಕ್ಯಾಂಪಸ್ಸಿನಲ್ಲಿ ಖಾದ್ಯಗಳ ಕಲರವ

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ
ಇನ್‍ಸ್ಪೈರ್ ಎಸ್ ಆರ್ ಎಸ್ ಕ್ಯಾಂಪಸ್ಸಿನಲ್ಲಿ ಖಾದ್ಯಗಳ ಕಲರ
ಚಿತ್ರದುರ್ಗ: ಚಿತ್ರದುರ್ಗ ನಗರದ ಎಸ್ ಆರ್ ಎಸ್ ಪಿಯು ಕಾಲೇಜಿನಲ್ಲಿ ಪ್ರತಿವರ್ಷದಂತೆ ಈ ವರ್ಷವು ಶನಿವಾರದಂದು ಕಾಲೇಜಿನ ಎ ಪಿ ಜೆ ಅಬ್ದುಲ್ ಕಲಾಂ ಸೈನ್ಸ್ ಪಾರ್ಕಿನಲ್ಲಿ ಅಭಿರುಚಿಗೆ ತಕ್ಕ ರುಚಿ-ರುಚಿಯಾದ ಖಾದ್ಯಗಳ ತಯಾರಿ, ನಿರೂಪಣಾ ಕೌಶಲ್ಯ ಅಭಿವ್ಯಕ್ತಿಗಾಗಿ “ಕಿಚನೋಮಿಕ್ಸ್” ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿಯೇ ಇರುವ “ಇನ್‍ಸ್ಪೈರ್ ಎಸ್ ಆರ್ ಎಸ್” ವೇದಿಕೆಯು ಆಯೋಜಿಸಿದ್ದ ಕಿಚನೋಮಿಕ್ಸ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅಭಿರುಚಿಗೆ ತಕ್ಕಂತೆ ವಿಧ ವಿಧವಾದ ಖಾದ್ಯಗಳನ್ನು ತಯಾರಿಸಿ ನೋಡುಗರ ಗಮನ ಸೆಳೆದರು.

ಇದರೊಂದಿಗೆ ಸಾಮಾನ್ಯ ಜ್ಞಾನ, ವೃತ್ತಿ ಕೌಶಲ್ಯ, ನಿರೂಪಣಾ ಸಾಮರ್ಥ್ಯ ದಂತಹ ನೈಪೂಣ್ಯತೆಗಳನ್ನು ಅಭಿವ್ಯಕ್ತಗೊಳಿಸಿದರು. ಈ ವರ್ಷ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಒಟ್ಟು ಹತ್ತು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಅವರ ಅಭಿರುಚಿಗೆ ತಕ್ಕಂತೆ ವಿವಿಧ ಖಾದ್ಯಗಳನ್ನು ತಯಾರಿಸಿದರು. ಅದರಲ್ಲಿ ಉಪಯೋಗಿಸಿರುವ ಹಣ್ಣು, ತರಕಾರಿ, ಸಾಂಬಾರು ಪದಾರ್ಥಗಳು ಹಾಗೂ ಅವುಗಳ ಔಷಧ ಗುಣಗಳು, ಪೌಷ್ಠಿಕತೆ, ಆರೋಗ್ಯಕ್ಕೆ ಲಭ್ಯವಾಗುವ ಜೀವಸತ್ವಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು.
ಹೋಟೆಲ್‍ಗಳಲ್ಲಿ ಇಂತಹ ರುಚಿಯಾದ ಅಡುಗೆಗಳನ್ನು ತಯಾರಿಸಿ ಜನರನ್ನು ಗಮನಸೆಳೆಯುವುದು ಹೇಗೆ, ಹೋಟೆಲ್‍ಗಳು ಖರ್ಚುಮಾಡುವ ಹಣ ಹಾಗೂ ಪಡೆದುಕೊಳ್ಳುವ ಲಾಭಗಳ ಬಗ್ಗೆ ಒಂದೊಂದು ತಂಡ ತಮ್ಮದೇ ಆದ ನಿರೂಪಣಾ ಶೈಲಿಯಲ್ಲಿ ತೀರ್ಪುಗಾರರ ಎದುರು ಸ್ಪಷ್ಟಪಡಿಸಿದರು.
ಎಲ್ಲಾ ತಂಡಗಳಿಗೆ ನಲವತೈದು ನಿಮೀಷಗಳ ಕಾಲಾವಕಾಶವನ್ನು ನೀಡಲಾಗಿತ್ತು. ಈ ಸಮಯದಲ್ಲಿ ಸುಮಾರು ಐವತ್ತರಿಂದ ಅರವತ್ತಕ್ಕೂ ಹೆಚ್ಚಿನ ಅಡುಗೆಗಳನ್ನು ಸಿದ್ಧಪಡಿಸಿದರು. ಸ್ಪರ್ಧೆಯಲ್ಲಿ ಗಮನ ಸೆಳೆವ ಪ್ರದರ್ಶನವನ್ನು ನೀಡಿದ

“ಫುಡ್ ಹೈವ್” ತಂಡ ಪ್ರಥಮ ಬಹುಮಾನವನ್ನು ಪಡೆದುಕೊಂಡರೆ, “ದಿ ಡೈನಾಮೈಟ್ಸ್” ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ ಯವರು, ವಾಣಿಜ್ಯ ವಿಭಾಗದವರಿಗೆ ಇರುವ ಈ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಮುಂದೆ ಉನ್ನತ ವ್ಯಾಸಂಗಕ್ಕೆ ಹೋದಾಗ ಹೋಟೆಲ್ ಮ್ಯಾನೇಜ್‍ಮೆಂಟ್‍ನಂತಹ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವಾಗ ಇಂತಹ ಕಾರ್ಯಕ್ರಮದ ಅನುಭವಗಳು ಅತ್ಯಂತ ಉಪಯುಕ್ತವಾಗುತ್ತವೆ ಎಂದರು.
ಕಾರ್ಯಕ್ರಮ ಕುರಿತು ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಂಗಾಧರ್ ಅವರು ಜೀವನವೇ ಒಂದು ಅಭಿರುಚಿ ಸಂತೋಷದ ಜೀವನವನ್ನು ಸಾಗಿಸಲು ಅಭಿರುಚಿಗಳು ಮುಖ್ಯ. ಯಾವ ಮನುಷ್ಯನಿಗೆ ಅಭಿರುಚಿಗಳು ಹೆಚ್ಚಿರುತ್ತವೊ ಅಂಥವರ ಬದುಕು ಸುಖಮಯವಾಗಿರುತ್ತದೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ದುಡಿದರೆ ಮಾತ್ರ ಸಂತೋಷ ಸಿಗುವುದಿಲ್ಲ, ಬದಲು ಒಂದು ಅಡುಗೆ ಮನೆಯಲ್ಲಿ ರುಚಿ-ರುಚಿಯಾದ ಅಡುಗೆಗಳನ್ನು ಸಿದ್ಧಪಡಿಸಿ ತಮ್ಮ ನೈಪೂಣ್ಯತೆಯೊಂದಿಗೆ ಜೀವನದಲ್ಲಿ ಸುಖವಾಗಿರಬಹುದು ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ರವಿ ಟಿ.ಎಸ್., ಸಂಚಾಲಕರಾದ ಶ್ರೀ ನಟರಾಜ ಎಂ. ವಿ., ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.