ಜಮೀನು ಹಸ್ತಾಂತರ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ದಾವಣಗೆರೆ: ಡಿಆರ್‌ಆರ್ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿನ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಜಮೀನನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಸ್ತಾಂತರಿಸುವುದನ್ನು ವಿರೋಧಿಸಿ ಡಿಆರ್‌ಆರ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಕಾಲೇಜು ಮುಂಭಾಗದ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಹದಡಿ ರಸ್ತೆಯ ಗ್ರಾಮಾಂತರ ಪೋಲೀಸ್ ಠಾಣೆ ಎದುರಿನಲ್ಲಿ ಇರುವ ಡಿಆರ್‌ಆರ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಂಘದೊoದೊಗೆ ಪ್ರತಿಭಟಿಸಿದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಪಾಲಿಟೆಕ್ನಿಕ್‌ಗೆ ಸಂಬಂಧ ಪಟ್ಟ ಜಾಗವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಸ್ತಾಂತರ ಮಾಡಬಾರದು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಡಿ.ಆರ್.ಆರ್.ವಿದ್ಯಾರ್ಥಿಗಳ ಸಂಘ ಪದಾಧಿಕಾರಿಗಳು ,ದಾವಣಗೆರೆಯ ಡಿಆರ್‌ಆರ್ ಪಾಲಿಟೆಕ್ನಿಕ್ ಸಂಸ್ಥೆಯ 3 ಎಕರೆ ಜಮೀನನ್ನು ಸರ್ಕಾರಿ ಕಾಲೇಜಿಗೆ ನೀಡಬೇಕೆಂದು ಏಕಪಕ್ಷೀಯವಾಗಿ ಸರ್ಕಾರ ನಿರ್ಧಾರ ಮಾಡಿದೆ. ಕೇವಲ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ನೀಡಿದ ಚಕ್ಕುಬಂದಿ ಆಧಾರದ ಮೇಲೆ ಸರ್ಕಾರ ಈ ಆದೇಶ ನೀಡಿದೆ. ಇದು ಸರಿಯಲ್ಲ ಎಂದು ಕಿಡಿಕಾರಿದರು.
ಸರ್ಕಾರ ಆದೇಶ ನೀಡಿದ ಜಾಗದಲ್ಲಿ ಡಿಆರ್‌ಆರ್ ಪಾಲಿಟೆಕ್ನಿಕ್‌ಗೆ ಸಂಬಂಧಿಸಿದ ಮೆಕ್ಯಾನಿಕಲ್ ವರ್ಕಶಾಪ್ , ಮಹಿಳಾ ವಿದ್ಯಾರ್ಥಿನಿಲಯ ಹಾಗೂ ಆಟದ ಮೈದಾನ ಇದೆ. ಆದರೆ , ಈ ಮೈದಾನದಲ್ಲಿ ಕಟ್ಟಡವನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಅಲ್ಲದೇ ಪಾಲಿಟೆಕ್ನಿಕ್ ಪ್ರಾಚಾರ್ಯರ ಗಮನಕ್ಕೆ ಬಾರದಂತೆ ಸಕಾರಿ ಪ್ರಥಮ ದರ್ಜೆ ಕಾಲೇಜಿನ ಅಧಿಕರಿಗಳು ನಮ್ಮ ಸಂಸ್ಥೆಯ ಒಳಗೆ ಅತಿಕ್ರಮಣ ಮಾಡಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರಣ ಜಿಲ್ಲಾಧಿಕಾರಿಗಳು , ಇಲ್ಲವೇ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಪ್ರಥಮ ದರ್ಜೆ ಕಾಲೇಜಿನವರಿಗೆ ಬೇರೆ ಕಡೆ ಜಾಗ ನೀಡಬೇಕು. ಇಲ್ಲವಾದರೆ ನಾವುಗಳು ಮುಷ್ಕರ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.