ಶಿಕ್ಷಕನಿಗೆ ಕೀಟಲೆ ಮಾಡಿದ ವಿದ್ಯಾರ್ಥಿಗಳು.! ಕ್ರೌರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ದಾವಣಗೆರೆ: ಶಿಕ್ಷಕನ ಮೇಲೆ ವಸ್ತುಗಳನ್ನು ಎಸೆಯುತ್ತಾ ವಿದ್ಯಾರ್ಥಿಗಳು ಕೀಟಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನಲ್ಲೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಠ ಮಾಡುತ್ತಿರುವ ಹಿಂದಿ ಶಿಕ್ಷಕರಿಗೆ ಅವಮಾನ ಮಾಡಿರುವ ಈ ವಿದ್ಯಾರ್ಥಿಗಳ ಸಮೂಹದ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸರಳ ವ್ಯಕ್ತಿತ್ವದ ಶಿಕ್ಷಕ ಪ್ರಕಾಶ್ ಬೋಗರ್ ಅವರು ಪಾಠ ಮಾಡಲು ಬಂದಾಗ ಪ್ರತಿ ದಿನ ಶಾಲೆಯಲ್ಲಿ ಈ ವಿದ್ಯಾರ್ಥಿಗಳು ಅವರಿಗೆ ಹಿಂದಿನಿಂದ ವಸ್ತುಗಳನ್ನು ಎಸೆಯುವುದು, ಕಸದ ಬುಟ್ಟಿಯನ್ನು ತಲೆ ಮೇಲೆ ಹಾಕುವುದು, ಹೊಡೆಯುವುದು ಮಾಡುತ್ತಿದ್ದಾರೆ. ಆದರೂ ಶಿಕ್ಷಕರು ಎಲ್ಲ ಅವಮಾನಗಳನ್ನು ಸಹಿಸಿಕೊಂಡಿದ್ದರು.
ಇಂತಹ ನೀಚ ವಿದ್ಯಾರ್ಥಿಗಳನ್ನು ಎದುರು ಹಾಕಿಕೊಳ್ಳುವುದು ಬೇಡ ಎಂದು ಸುಮ್ಮನಿದ್ದರು. ಅಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿಗಳು ಕೀಟಲೆಯನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದಾರೆ. ಇದೀಗ ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿದ್ಯಾರ್ಥಿಗಳ ಇಂತಹ ನೀಚ ಕೃತ್ಯಕ್ಕೆ ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿದೆ.