ಆಶಾ ಕಾರ್ಯಕರ್ತೆಯರ ಹೋರಾಟದ ಯಶಸ್ಸು; ಗುರಿ ತಲುಪಲು ಇನ್ನೊಂದೇ ಗೇಣು..!
ಬೆಂಗಳೂರು: ಆಶಾ ಕಾರ್ಯಕರ್ತೆಯರ ಸುದೀರ್ಘ ಹೋರಾಟ ಇದೀಗ ಫಲಕೊಟ್ಟಿದೆ. ಗೌರವಧನ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವಾರು ಹಂತಗಳಲ್ಲಿ ಹೋರಾಟ ನಡೆಸಿರುವ ಆಶಾ ಹೋರಾಟಗಾರರು ಕೊನೆಗೂ ಯಶಸ್ಸು ಸಾಧಿಸಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಆಶಾ ಸೋದರಿಯರಿಗೆ ಸೂಕ್ತ ನ್ಯಾಯ ಒದಗಿಸುವ ಭರವಸೆ ಸರ್ಕಾರದಿಂದ ಸಿಕ್ಕಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹೇಳಿದೆ.
ಈ ಕುರಿತಂತೆ ಮಾಧ್ಯಮ ಪ್ರಕಟಣೆ ಮೂಲಕ ರಾಜ್ಯದ ಆಶಾ ಕಾರ್ಯಕರ್ತೆಯರ ಸಮೂಹಕ್ಕೆ ಮಾಹಿತಿ ಹಂಚಿಕೊಂಡಿರುವ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷರಾದ ಕೆ.ಸೋಮಶೇಖರ್ ಯಾದಗಿರಿ ಹಾಗೂ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ, ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಆಶಾ ಕಾರ್ಯಕತೆಯರು ರಾಜ್ಯವ್ಯಾಪಿಯಾಗಿ ಜಿಲ್ಲಾ ಕೇಂದ್ರದಲ್ಲಿ ಮತ್ತು ಉತ್ತರ ಕರ್ನಾಟಕದ ಆರು ಜಿಲ್ಲೆಗಳು 2 ದಿನಗಳ ಕಾಲ ‘ಬೆಳಗಾವಿ ಚಲೋ’ ನಡೆಸಿದ ಹೋರಾಟದ ಯಶಸ್ಸಾಗಿದೆ ಎಂದಿದ್ದಾರೆ.
ಆಶಾ ಹೋರಾಟದ ಫಲಶ್ರುತಿ ಬಗ್ಗೆ ಹೇಳಿಕೊಂಡಿರುವ ಈ ಪ್ರಮುಖರು, ಕಳೆದ ಡಿಸೆಂಬರ್ 27, 28ರಂದು ರಾಜ್ಯ ವ್ಯಾಪಿಯಾಗಿ ಆಶಾ ಹೋರಾಟ ಯಶಸ್ವಿಯಾಗಿ ನಡೆದಿದೆ. ಅದರಲ್ಲೂ “ಬೆಳಗಾವಿ ಚಲೋ” ಹೋರಾಟದಲ್ಲಿ ಆರು ಜಿಲ್ಲೆಯ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದಾರೆ. ಈ ಹೋರಾಟಗಳನ್ನು ಯಶಸ್ಸು ಮಾಡಿದ ಎಲ್ಲಾ ಆಶಾ ಸೋದರಿಯರಿಗೆ ಸಂಘದ ರಾಜ್ಯ ಸಮಿತಿಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅಂದು ಹೋರಾಟದ ಸ್ಥಳಕ್ಕೆ ಆಗಮಿಸಿದ್ದ ಇಲಾಖೆಯ ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಕ್ತರು, ಜನವರಿ16 ರಂದು ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸುವ ಪತ್ರವನ್ನು ನೀಡಿರುತ್ತಾರೆ. ನಂತರ ಜನವರಿ 16 ಮತ್ತು 23ರಂದು ನಡೆದ ಆಶಾ ಕಾರ್ಯಕರ್ತೆಯರ ರಾಜ್ಯಮಟ್ಟದ ಕುಂದು-ಕೊರತೆ ಸಭೆಯಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಕ್ತರು ಹಾಗೂ ಎಂಡಿ ಓಊಒ ಹಾಗೂ ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿದ್ದಾರೆ. ಚರ್ಚೆಯಲ್ಲಿ ಈ ಕೆಳಗಿನಂತೆ ಹಲವು ಕ್ರಮಗಳು ತೆಗೆದುಕೊಳ್ಳುವ ಪ್ರಸ್ತಾಪಗಳು ಬಂದಿವೆ. ಹಾಗೂ ಇಲಾಖೆ ತೆಗೆದುಕೊಂಡಿರುವ ತೀರ್ಮಾನಗಳು ತಮ್ಮ ಹೋರಾಟದಿಂದ ದೊರೆತ ಪ್ರತಿಫಲಗಳಾಗಿವೆ ಎಂದು ಕೆ.ಸೋಮಶೇಖರ್ ಯಾದಗಿರಿ ಹಾಗೂ ಡಿ. ನಾಗಲಕ್ಷ್ಮಿ ಹೇಳಿದ್ದಾರೆ.
ಹಣಕಾಸು ಸಂಬಂಧಿತ ಕೆಲ ಬೇಡಿಕೆಗಳ ಬಗ್ಗೆ ಫೆಬ್ರವರಿ 17ರಂದು ಮಂಡನೆಯಾಗುವ ರಾಜ್ಯ ಬಜೆಟ್ ಸಂದರ್ಭದಲ್ಲಿ ಘೋಷಿಸುವುದಾಗಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ಕೆಲವು ಬೇಡಿಕೆಗಳ ಬಗ್ಗೆ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿರುವರು ಎಂದವರು ವಿವರಿಸಿದ್ದಾರೆ.
ರಾಜ್ಯದ ನಿಶ್ಚಿತ ಮಾಸಿಕ ಗೌರವ ಧನ ರೂ.5,000 ಮತ್ತು ನಾನ್ ಎಂ ಸಿ ಟಿ ಎಸ್ (ರೂಟೀನ್ ಕೆಲಸಕ್ಕೆ ಇರುವ) ರೂ.2,000 ಒಟ್ಟಿಗೆ ಸೇರಿಸಿ ರೂ.7,000 ಒಂದೇ ಗೌರವ ಧನ ಮಾಡಿ ಕೊಡುವುದಾಗಿ ಭರವಸೆ ಸಿಕ್ಕಿದೆ..
ನಿಶ್ಚಿತ ಗೌರವ ಧನ 5,000 ರೂಪಾಯಿಗಳನ್ನು 6,000 ರೂಪಾಯಿಗಳಿಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಕುರಿತು ಅಧಿಕಾರಿಗಳು ದೃಢೀಕರಣ ನೀಡಿದ್ದಾರೆ.
ಬಜೆಟ್ ನಲ್ಲಿ ನಿಶ್ಚಿತ ಗೌರವ ಧನ ರೂ.6,000ಕ್ಕೆ ಹೆಚ್ಚಿಸಿದರೆ ಪ್ರತಿ ಆಶಾಗೆ ಮಾಸಿಕ ನಿಶ್ಚಿತ ರೂ. 8,000 ಒಟ್ಟಿಗೆ ಲಭಿಸಲಿದೆ
ಇದರೊಂದಿಗೆ ಖಅಊ ಪೋರ್ಟಲ್ನಲ್ಲಿ ಹೆರಿಗೆ ಮತ್ತಿತರ ಸೇವೆಗಳಿಗೆ ಪೋರ್ಟಲ್ನಲ್ಲಿ ತುಂಬುವ ಪ್ರೋತ್ಸಾಹಧನವೂ ಸಿಗಲಿದೆ.
2 ವರ್ಷಗಳ ಹಳೆಯ ಬಾಕಿ ಕೊಡಲಾಗುತ್ತದೆ. ಅದಕ್ಕಾಗಿ ಖಅಊ ಪೋರ್ಟಲ್ನಲ್ಲಿ ಸದ್ಯಕ್ಕೆ 2022-23 ಸಾಲಿನಲ್ಲಿ ಉಳಿದಿದ್ದ ಚಟುವಟಿಕೆಗಳನ್ನು ತುಂಬಲು ಅವಕಾಶ ನೀಡಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ 2021-22 ಸಾಲಿನ ಉಳಿದಿರುವ ಚಟುವಟಿಕೆಗಳನ್ನು ತುಂಬಲು ಪೋರ್ಟಲ್ ಓಪನ್ ಮಾಡಲಾಗುವುದು. ಆಗ ಅವುಗಳನ್ನು ತುಂಬಲು ತಿಳಿಸಲಾಗಿದೆ.
ಅದರಂತೆ ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಆಶಾಗಳಿಂದ ಮಾಹಿತಿ ಪಡೆದು ಎಂಟ್ರಿ ಮಾಡಲು ಕ್ರಮ ಕೈಗೊಂಡು ಖಅಊ ಪೋರ್ಟಲ್ನಲ್ಲಿ ಬಾಕಿ ಇರುವಂತಹ ದಾಖಲೆಗಳನ್ನು ಫೀಡ್ ಮಾಡಿಸುತ್ತಿರುವರು. ಆ ಮೂಲಕ ಎರಡು ವರ್ಷಗಳಿಂದ ಉಳಿದಿದ್ದ ಕೆಲವು ಚಟುವಟಿಕೆಗಳ ಹಿಂಬಾಕಿ ಹಣ ಆಶಾಗಳಿಗೆ ಸೇರುವಂತಾಗಿದೆ.
ನಗರ ಆಶಾಗಳಿಗೆ ನಿಗದಿತ ಪ್ರೋತ್ಸಾಹ ಧನ ಹೆಚ್ಚಿಸುವುದು.
ಆಶಾಗೆ ರೂ. ೩ ಲಕ್ಷ ನಿವೃತ್ತಿ ಪರಿಹಾರ ನೀಡುವುದು.
ತೀವ್ರ ಅನಾರೋಗ್ಯದಿಂದ ಇದ್ದು ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಮೂರು ತಿಂಗಳ ನಿಶ್ಚಿತ ಗೌರವ ಧನ ಸಹಿತ ರಜೆ ನೀಡುವುದು.
ಮೇಲಿನ 3 ಇಲಾಖೆ ಒಪ್ಪಿಗೆ ಸೂಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ದೃಢಪಡಿಸಿದ್ದಾರೆ.
ಆಶಾ ಸುಗಮಕಾರರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಬರೀ ಆಶಾ ಕಾರ್ಯಕರ್ತೆಯರಾಗಿ ಮುಂದುವರೆಯುವ ಮಹತ್ವದ ನಿರ್ಧಾರವನ್ನು ಇಲಾಖೆಯಿಂದ ಕೈಗೊಂಡಿದ್ದರು. ಇದನ್ನು ಬಲವಾಗಿ ವಿರೋಧಿಸಿದ ಸಂಘದ ರಾಜ್ಯ ಸಮಿತಿ, ಸುಗಮಕಾರರನ್ನು ಪ್ರತ್ಯೇಕ ಗೊಳಿಸುವುದಾದರೆ, ಹುದ್ದೆಗೆ ತಕ್ಕಂತೆ ವೇತನ ಭತ್ಯೆಗಳನ್ನು ನೀಡಿ. ಇಲ್ಲದಿದ್ದರೆ ಸದ್ಯಕ್ಕೆ ಯಥಾಸ್ಥಿತಿಯನ್ನು ಮುಂದುರೆಸಬೇಕು. ಎಂದು ತಿಳಿಸಲಾಯಿತು. ಹಾಗೆಯೇ ಸಂಘದಿಂದ ಸಭೆ ಕರೆದು ಸುಗಮಕಾರರೊಂದಿಗೆ ಚರ್ಚೆ ಮಾಡಿ ತಿಳಿಸಲಾಗುವುದು ಎಂದು ಸಭೆಯಲ್ಲಿ ಸ್ಪಷ್ಟ ಪಡಿಸಲಾಗಿತ್ತು. ನಂತರ ಜನವರಿ 23ರಂದು ಇನ್ನೊಮ್ಮೆ ಸಭೆಗೆ ಹೋದಾಗ ಚರ್ಚಿಸಿದ ನಂತರ ಸದ್ಯಕ್ಕೆ ಹಿಂದಿನಂತೆ ಆಶಾ ಮತ್ತು ಸುಗಮಕಾರರನ್ನಾಗಿ ಮುಂದುವರೆಸಲಾಗುವುದು ಎಂದು ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ.
ಆಶಾಗಳಿಗೆ ಆದ್ಯತೆ ಕೊಟ್ಟು ಚಿಕಿತ್ಸೆ ನೀಡಲು ಅನುವಾಗುವುದಕ್ಕೆ ಪ್ರತಿ ಆಶಾಗೆ ವಿಶೇಷ ಆರೋಗ್ಯ ಕಾರ್ಡ್ ನೀಡಲಾಗುವುದು. ಪ್ರತಿ ಆಶಾಳಿಗೆ ವರ್ಷದ ಚಿಕಿತ್ಸೆಗೆ ರೂ. 5 ಲಕ್ಷದವರೆಗೆ ಸರ್ಕಾರವೇ ವೆಚ್ಚ ಭರಿಸುವ ಯೋಜನೆ ಜಾರಿಯಾಗಲಿದೆ.
ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆ ಅಥವಾ ನಿಯೋಜಿತ ಖಾಸಗಿ ಆಸ್ಪತ್ರೆಗಳಲ್ಲೂ ಕೂಡ ಉಚಿತ ಚಿಕಿತ್ಸೆ ಪಡೆಯುವ ಸೌಕರ್ಯ ನೀಡಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಒಂದೆರಡು ವಾರದಲ್ಲಿ ಆರ್ಸಿಎಚ್ ಪೋರ್ಟಲ್ಗೆ ಸಂಬಂಧಿಸಿದ ತಾಂತ್ರಿಕ ದೋಷಗಳ ನಿವಾರಣೆಗಾಗಿ ಆಯುಕ್ತರು ಮತ್ತು ಎಂಡಿ ಇವರ ಸಮ್ಮುಖದಲ್ಲಿ ಮತ್ತೊಂದು ಸಭೆ ನಡೆಯಲಿದೆ ಎಂದು ತಿಳಿಸಿರುವ ಕೆ.ಸೋಮಶೇಖರ್ ಯಾದಗಿರಿ ಹಾಗೂ ಡಿ.ನಾಗಲಕ್ಷ್ಮಿ ಅವರು, ಇದೆಲ್ಲವೂ ಸಂಘದ ಮಾರ್ಗದರ್ಶನದಲ್ಲಿ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಮೇಲಿನ ಎಲ್ಲಾ ಬೇಡಿಕೆಗಳಾಗಿದ್ದು, ನಮ್ಮ ಕೈಸೇರುವವರೆಗೆ ಆಶಾ ಸೋದರಿಯರು ಎಚ್ಚರದಿಂದ ಇದ್ದು ಪಡೆದುಕೊಳ್ಳಬೇಕು. ಸರ್ಕಾರ ನುಡಿದಂತೆ ನಡೆಯದಿದ್ದ ಪಕ್ಷದಲ್ಲಿ ಸಂಘದಿಂದ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಶಾ ಕಾರ್ಯಕರ್ತೆಯರು ಎಂದಿನಂತೆ ತಮ್ಮ ಒಗ್ಗಟ್ಟನ್ನು ಕಾಪಾಡಿಕೊಳ್ಳಲು ಸಂಘವು ಕರೆ ನೀಡುತ್ತದೆ ಎಂದು ತಿಳಿಸಿದ್ದಾರೆ.