ಸಚಿವ ಈಶ್ವರಪ್ಪ ವಿರುದ್ಧ ದೇಶ ದ್ರೋಹ ಕೇಸ್ ದಾಖಲಿಸಬೇಕು – ಸುರೇಶ್.ಎಂ.ಜಾಧವ್
ನಮ್ಮ ದೇಶದ ಗೌರವ,ನಮ್ಮ ಹೆಮ್ಮೆಯಾದ, ಭಾರತದ ರಾಷ್ಟ್ರಧ್ವಜದ ಬಗ್ಗೆ ಅಗೌರವ ತೋರಿಸಿರುವ ಸಚಿವ ಈಶ್ವರಪ್ಪನವರ ವಿರುಧ್ದ ಪೊಲೀಸ್ ಇಲಾಖೆ ಹಾಗೂ ಅಲ್ಲಿನ ಜಿಲ್ಲಾಡಳಿತ ಸ್ವಯಂಪ್ರೇರಿತವಾಗಿ ದೇಶದ್ರೋಹದ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಂಚಾಲಕ ಸುರೇಶ್.ಎಂ.ಜಾಧವ್ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಪ್ರತಿಭಟನೆ ವೇಳೆ ಕೆಲವು ಪುಂಡರು ಕಾಲೇಜ್ ಮುಂಭಾಗದಲ್ಲಿರುವ ಧ್ವಜಸ್ತಂಭದಲ್ಲಿ ಭಗವಾ ಧ್ವಜ ಹಾರಿಸಿದ್ದರು. ಅದನ್ನು ಸಮರ್ಥಿಸುವ ಭರದಲ್ಲಿ ಸನ್ಮಾನ್ಯ ಸಚಿವರು ಮುಂದಿನ ದಿನಗಳಲ್ಲಿ ಭಗವಾ ಧ್ವಜವೇ ರಾಷ್ಟಧ್ವಜವಾಗಲಿದೆ ಎಂದು ಹೇಳಿದ್ದು ಅವರ ದೇಶಪ್ರೇಮ ಎಂಥಾ ಕೀಳುಮಟ್ಟದ್ದು ಎಂದು ತೋರಿಸುತ್ತದೆ ಎಂದು ಹರಿಹಾಯ್ದರು.
ಅದೆಷ್ಟೋ ವರ್ಷಗಳ ಕಾಲ ರಾಷ್ಟ್ರಧ್ವಜವನ್ನೇ ಒಪ್ಪದ ಆರೆಸ್ಸೆಸ್ ವರ್ಗವನ್ನು ಮೆಚ್ಚಿಸಲು, ಸಮಾಜದಲ್ಲಿ ಶಾಂತಿ ಕದಡಲು ಸಚಿವರು ತಾವು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತೇನೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಇಂಥಾ ಸಚಿವರಿಂದ ರಾಜ್ಯದ ಜನತೆ ಅದ್ಹೇಗೆ ಒಳ್ಳೆಯದನ್ನು ಬಯಸಲು ಸಾಧ್ಯ ಇವರನ್ನು ತಕ್ಷಣ ಸಚಿವ ಸಂಪುಟದಿಂದ ಹೊರಗಿಟ್ಟು ಇಂಥವರಿಂದ ಮುಂದಾಗುವ ಅನಾಹುತಗಳನ್ನು ತಡೆಯಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ರಾಜ್ಯದಲ್ಲಿ ಸಧ್ಯ ಪರಿಸ್ಥಿತಿ ಸರಿ ಇಲ್ಲ ಇಂಥಾ ಪರಿಸ್ಥಿತಿಯಲ್ಲಿ ರಾಜ್ಯದ ಜನತೆಗೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಮನವಿ ಮಾಡಿಕೊಂಡು ಸೂಕ್ತ ಕ್ರಮಕೈಗೊಳ್ಳೋದನ್ನ ಬಿಟ್ಟು ಇನ್ನೂ ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಕೆಲಸ ಶಾಲ್ ಹಂಚೋದು,ಗಲಾಟೆಗೆ ಹುಡುಗರನ್ನ ಹುರಿದುಂಬಿಸೋದು ಮತ್ತು ಸಮಾಜದಲ್ಲಿ ಅಶಾಂತಿ ಕದಡೋ ಹೇಳಿಕೆ ನೀಡಿ ಅದನ್ನ ಬೇರೆಯವರ ಮೇಲೆ ಹಾಕುವುದು ಇದೇ ಈ ಸಚಿವರ ಮುಖ್ಯ ಕೆಲಸವಾಗಿದೆ ಈ ರೀತಿಯ ಸಮಾಜಘಾತುಕ ಕೆಲಸ ಮಾಡೆಲೆಂದೇ ಬಂದಂತೆ ಸಚಿವರು ಆಡುತ್ತಿದ್ದು ಇಂಥವರ ವಿರುಧ್ದ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಇನ್ನು ಸದ್ಯ ಹಿಜಾಬ್ ಪ್ರಕರಣ ಕೋರ್ಟ್ ಅಂಗಳದಲ್ಲಿದ್ದು ದೇಶದ ಭವಿಷ್ಯದ ಕನಸುಹೊತ್ತ ಸರ್ವ ಧರ್ಮದ ವಿದ್ಯಾರ್ಥಿಗಳು ಯಾವುದೇ ಅನೈತಿಕ ಘಟನೆಗಳಿಗೆ ಕಿವಿಗೊಡದೆ ತಮ್ಮ ಭವಿಷ್ಯದ ಬಗ್ಗೆ ಮಾತ್ರ ಚಿಂತಿಸಬೇಕು ಎಂದು ಸಲಹೆ ನೀಡಿದರು.