ಐಎಎಸ್ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಪ್ರಧಾನಿಗೆ ವಕೀಲ ಅನೀಸ್ ಪಾಷ ಮನವಿ
ದಾವಣಗೆರೆ: ರೈತ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಕಾನೂನು ಕೈಗೆತ್ತಿಕೊಂಡಿರುವ ಐ.ಎ.ಎಸ್ ಅಧಿಕಾರಿ ಆಯುಷ್ ಸಿನ್ಹ ಅವರನ್ನು ತಕ್ಷಣ ಕೆಲಸದಿಂದ ಅಮಾನತ್ತು ಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿರಿಯ ವಕೀಲ ಅನೀಸ್ ಪಾಷ ಮನವಿ ಮಾಡಿದ್ದಾರೆ.
ಸಂಯುಕ್ತ ರೈತ ಮೋರ್ಚಾ, ರೈತ ಸಂಘಟನೆಗಳು ಮಹಾ ಪಂಚಾಯತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಐ.ಎ.ಎಸ್ ಅಧಿಕಾರಿ ಆಯುಷ್ ಸಿನ್ಹ ಅವರು ಹುದ್ದೆಯ ದರ್ಪದಿಂದ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಪ್ರಚೋದನಾತ್ಮಕವಾಗಿ ಹೇಳಿಕೆಯನ್ನು ನೀಡಿದ್ದು, ಪ್ರಚೋದನೆಗೊಂಡ ಪೊಲೀಸ್ ಅಧಿಕಾರಿಗಳು ಸುಮಾರು ಹತ್ತಾರು ಜನ ರೈತರ ಮೇಲೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ರೈತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೀತಿಯ ಪ್ರಚೋದನಾತ್ಮಕ ಹೇಳಿಕೆಯು ಸಂವಿಧಾನ ಬಾಹಿರ ಹಾಗೂ ಭಾರತ ದಂಡ ಸಂಹಿತೆ (ಐ.ಪಿ.ಸಿ) ಕಲಂ 307 ಅಡಿಯಲ್ಲಿ ಈ ವಿಚಾರದ ಬಗ್ಗೆ ರೈತ ಮುಖಂಡರು ಮೇಲಾಧಿಕಾರಿಗಳಿಗೆ ಪಿರ್ಯಾದನ್ನು ಸಲ್ಲಿಸಿದರೂ ಕೂಡ ಮೇಲಾಧಿಕಾರಿಗಳು ಐ.ಎ.ಎಸ್ ಅಧಿಕಾರಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ.
ಸುಮಾರು 500ಕ್ಕು ಹೆಚ್ಚು ರೈತ ಸಂಘಟನೆಗಳು 9 ತಿಂಗಳಿನಿಂದ ಮೂರು ಕೃಷಿ ಕಾನೂನು ತಿದ್ದುಪಡಿ ವಿರೋಧಿಸಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು, ಕೇಂದ್ರ ಸರ್ಕಾರವು ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ರೀತಿ ಸಂವಿಧಾನ ಬದ್ಧವಾಗಿ ಹೋರಾಟ ಮಾಡುತ್ತಿರುವ ರೈತರ ಸಮಸ್ಯೆಯನ್ನು ಆಲಿಸಿ ಅವರ ಸಮಸ್ಯೆಗಳನ್ನು ಸ್ಪಂದಿಸುವ ಬದಲಿಗೆ ಅವರ ವಿರುದ್ಧವೇ ಕಾನೂನು ಬಾಹಿರವಾಗಿ ಹೋರಾಟಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನು ಕೈಗೆತ್ತಿಕೊಂಡು ಕಾನೂನು ಬಾಹಿರವಾಗಿ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿರುವ ಆಯುಷ್ ಸಿನ್ಹ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲು ನಿರ್ದೇಶನ ನೀಡಿ ಈ ಕೂಡಲೇ ಅವರನ್ನು ಅಮಾನತ್ತಿನಲ್ಲಿಡಲು ಮೇಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.