Suspend: ನಿಯಮಬಾಹಿರವಾಗಿ ಸೂಕ್ಷ್ಮ ಪ್ರದೇಶದಲ್ಲಿ ಹುಟ್ಟುಹಬ್ಬ ಆಚರಣೆ.! ಸಹಾಯಕ ಇಂಜಿನಿಯರ್‌ಗಳು ಹಾಗೂ ಎಫ್ ಡಿಸಿ ಅಮಾನತು

ಬೆಂಗಳೂರು: (Suspend) ದಿ:10.03.2025 ರ ಪತ್ರದಲ್ಲಿ ಲೋಕೋಪಯೋಗಿ ಇಲಾಖೆ ವಿಶೇಷ ಕಟ್ಟಡಗಳ ಉಪ ವಿಭಾಗ, ಉಚ್ಚ ನ್ಯಾಯಾಲಯ, ಬೆಂಗಳೂರು ಇಲ್ಲಿನ ಅಧಿಕಾರಿ/ಸಿಬ್ಬಂದಿಗಳಿಂದ ನಿಯಮ ಬಾಹಿರವಾಗಿ ಹುಟ್ಟುಹಬ್ಬ ಆಚರಿಸಿರುವ ದೂರಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ಕೈಗೊಂಡು 10 ದಿನದೊಳಗಾಗಿ ತನಿಖಾ ವರದಿಯನ್ನು ಸಲ್ಲಿಸುವಂತೆ, ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ(ಕೇಂದ್ರ) ಶಿವಮೊಗ್ಗ ಇವರನ್ನು ಕೋರಲಾಗಿತ್ತು.
ಅದರಂತೆ ದಿ:03.04.2025ರ ಪತ್ರದಲ್ಲಿ ಮುಖ್ಯ ಇಂಜಿನಿಯರ್. ಸಂಪರ್ಕ ಮತ್ತು ಕಟ್ಟಡ(ಕೇಂದ್ರ), ಶಿವಮೊಗ್ಗ ಇವರು ಕಛೇರಿಯ ಅಧಿಕಾರಿ/ಸಿಬ್ಬಂದಿಗಳಾದ ಶ್ರೀ ನವೀನ್, ಸ.ಇಂ. ಶ್ರೀ ಅಮೀತ್ ಎಸ್ ಆನದಿನ್ನಿ, ಸ.ಇಂ. ಶ್ರೀ ಜಿ.ಹೆಚ್.ಚಿಕ್ಕೇಗೌಡ, ಪ್ರ.ದ.ಸಹಾಯಕರು, ಶ್ರೀಮತಿ ಅಂಬಿಕಾ, ದ್ವಿ.ದ.ಸ, ಶ್ರೀಮತಿ ಮೇಘಾ, ದ್ವಿ.ದ.ಸ. ಶ್ರೀ ರಜನೀಶ್, ಎಸ್. ದ್ವಿ.ದ.ಸ, ಶ್ರೀಮತಿ ವೆಂಕಟಮ್ಮ, ಗ್ರೂಪ್-ಡಿ ಹಾಗೂ ಬೇರೆ ಕಛೇರಿ ಸಿಬ್ಬಂದಿಗಳಾದ ಶ್ರೀಮತಿ ಮೀನಾ, ಸ.ಇಂ ಹಾಗೂ ಕುಮಾರಿ ಲಾವಣ್ಯ, ಸ.ಇಂ ಇವರುಗಳು ಮತ್ತು ಗುತ್ತಗದಾರರಾದ ಶ್ರೀ ಸಂಗಮೇಶ್ ಮತ್ತು ಶ್ರೀ ಕಿರಣ್ ಇವರುಗಳು ಸೇರಿ ಸರ್ಕಾರಿ ಕಛೇರಿಯಲ್ಲಿ ನಿಯಮ ಬಾಹಿರವಾಗಿ ಹುಟ್ಟುಹಬ್ಬವನ್ನು ಆಚರಿಸಿರುವುದು ತನಿಖೆಯಿಂದ ಕಂಡುಬಂದಿರುತ್ತದೆ. ಪ್ರಸ್ತಾಪಿತ ಕಛೇರಿಯು ಮಾನ್ಯ ಉಚ್ಚ ನ್ಯಾಯಾಲಯದ ಕಟ್ಟಡವಾಗಿರುತ್ತದೆ. ಅಂತಹ ಸೂಕ್ಷ್ಮ ಪ್ರದೇಶದಲ್ಲಿ ಇದ್ದಾಗಲೂ ಸಹ ಮೇಲಾಧಿಕಾರಿಗಳ ಗಮನಕ್ಕೆ ತರದೇ ಸಿ.ಸಿ ಕ್ಯಾಮೆರಾ ಸ್ವಿಚ್ ಆಫ್ ಮಾಡಿರುವುದು ಭದ್ರತಾ ಲೋಪ ಮತ್ತು ಕರ್ತವ್ಯ ಲೋಪವೆಸಗಿರುವುದು ಸಾಭೀತಾಗಿರುತ್ತದೆ. ಮತ್ತು ಸರ್ಕಾರಿ ನೌಕರರಿಗೆ ತರವಲ್ಲದ ರೀತಿ ಹಾಗೂ ಕಛೇರಿಯ ಘನತೆ ಗೌರವ ಕಾಪಾಡುವುದರಲ್ಲಿ ವಿಫಲರಾಗಿ ಕಛೇರಿಯ ಶಿಸ್ತನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಆದ್ದರಿಂದ ಮೇಲ್ಕಾಣಿಸಿದ ಅಧಿಕಾರಿ/ಸಿಬ್ಬಂದಿಗಳ ಕರ್ತವ್ಯ ಲೋಪದನುಸಾರ ಶಿಸ್ತುಕ್ರಮ ಜರುಗಿಸಬಹು ದಾಗಿದೆಯೆಂದು ಶಿಫಾರಸ್ಸು ಮಾಡಿರುತ್ತಾರೆ.
ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ(ಕೇಂದ್ರ), ಶಿವಮೊಗ್ಗ ರವರ ವರದಿಯನ್ನು ಪರಿಶೀಲಿಸಲಾಗಿ, ಶ್ರೀ ಜಿ.ಹೆಚ್.ಚಿಕ್ಕೇಗೌಡ, ಪ್ರ.ದ.ಸ ಇವರ ಸೂಚನೆಯ ಮೇರೆಗೆ ಕಾರ್ಯಕ್ರಮದ ತಯಾರಿಯನ್ನು ಶ್ರೀಮತಿ ಅಂಬಿಕಾ, ದ್ವಿ.ದ.ಸ, ಶ್ರೀಮತಿ ಮೇಘಾ.ಡಿ, ದ್ವಿ.ದ.ಸ. ಶ್ರೀ ರಜನೀಶ್.ಎಸ್, ದ್ವಿ.ದ.ಸ, ಮತ್ತು ಶ್ರೀಮತಿ ವೆಂಕಟಮ್ಮ, ಗ್ರೂಪ್-ಡಿ ನೌಕರರು ಇವರುಗಳು ಮಾಡಿರುವುದು ಕಂಡುಬಂದಿರುತ್ತದೆ. ಪ್ರಸ್ತಾಪಿತ ಕಛೇರಿಯು ಮಾನ್ಯ ಉಚ್ಚ ನ್ಯಾಯಾಲಯದಲ್ಲಿರುವ ಕಟ್ಟಡವಾಗಿದ್ದು ಅಂತಹ ಸೂಕ್ಷ್ಮ ಪ್ರದೇಶದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರದೇ ಸಿ.ಸಿ.ಕ್ಯಾಮೆರಾವನ್ನು ಶ್ರೀ ಜಿ.ಹೆಚ್.ಚಿಕ್ಕೇಗೌಡ ಇವರ ಸೂಚನೆಯ ಮೇರೆಗೆ ಶ್ರೀಮತಿ ವೆಂಕಟಮ್ಮ, ಗ್ರೂಫ್-ಡಿ ಇವರು ಸ್ವಿಚ್ ಆಫ್ ಮಾಡಿ ಭದ್ರತಾ ಲೋಪವೆಸಗಿರುವುದು ಕಂಡುಬರುತ್ತದೆ.
ಸರ್ಕಾರದಿಂದ ಅಧಿಸೂಚಿತಗೊಂಡ ಪ್ರಮುಖ ಹಾಗೂ ಗಣ್ಯವ್ಯಕ್ತಿಗಳ ಜಯಂತಿಗಳನ್ನು ಮತ್ತು ಕಾರ್ಯಕ್ರಮಗಳನ್ನು ಸರ್ಕಾರಿ ಕಛೇರಿ ಮತ್ತು ಆವರಣದಲ್ಲಿ ಆಚರಿಸಲು ಮಾತ್ರ ಅವಕಾಶವಿದ್ದು, ಆದರೆ ಪ್ರಸ್ತುತ ಪ್ರಕರಣದಲ್ಲಿ ನಿಯಮಬಾಹಿರವಾಗಿ ಸರ್ಕಾರಿ ಕಛೇರಿಯಲ್ಲಿ ಸಿಬ್ಬಂದಿಯವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಆಚರಿಸಿರುವುದು ಗಮನಾರ್ಹ/ಗಂಭೀರ ಅಪರಾಧವಾಗಿರುತ್ತದೆ. ಶ್ರೀಮತಿ ಮೀನಾ.ಎ.ಟಿ, ಸ.ಇಂ ಇವರು ನಿಯೋಜನೆ ಮೇರೆಗೆ ನಗರಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ಅವರ ಹುಟ್ಟುಹಬ್ಬವನ್ನು ಸೂಕ್ಷ್ಮ ಪ್ರದೇಶವಾದ ಮಾನ್ಯ ಉಚ್ಚ ನ್ಯಾಯಾಲಯದ ಕಟ್ಟಡದಲ್ಲಿನ ಲೋಕೋಪಯೋಗಿ ವಿಶೇಷ ಕಟ್ಟಡಗಳ ಉಪ ವಿಭಾಗದಲ್ಲಿ ಆಚರಿಸಿರುವುದು ಈ ಹುಟ್ಟುಹಬ್ಬಕ್ಕೆ ಹೊರಗಿನವರಾದ ಕುಮಾರಿ ಲಾವಣ್ಯ, ಸ.ಇಂ ಮತ್ತು ಶ್ರೀ ಅಮೀನ್ ಎಸ್. ಆನದಿನ್ನಿ, ಶ್ರೀ ನವೀನ್, ಇವರುಗಳು ಸಹ ಭಾಗಿಯಾಗಿರುತ್ತಾರೆ. ಜೊತೆಗೆ ಶ್ರೀ ನವೀನ್ ಮತ್ತು ಅಮೀನ್ ಎಸ್ ಆನದಿನ್ನಿ ಇವರು ಶ್ರೀ ಕಿರಣ್ ಗುತ್ತಿಗೆದಾರರ ಜೊತೆಗೂಡಿ ನ್ಯಾಯಾಲಯದ ಸಮ್ಮೇಳನದ ಸಭಾಂಗಣದ ತುರ್ತು ಕಾಮಗಾರಿಗೆ ಸಂಬಂಧಿಸಿದ ನಕ್ಷೆಯನ್ನು ತಯಾರು ಮಾಡಿ ನಂತರ ಹುಟ್ಟುಹಬ್ಬಕ್ಕ ಹೋಗಿರುತ್ತಾರೆ.
ಲೋಕೋಪಯೋಗಿ ವಿಶೇಷ ಕಟ್ಟಡಗಳ ಉಪ ವಿಭಾಗ, ಉಚ್ಚ ನ್ಯಾಯಾಲಯ, ಬೆಂಗಳೂರು ಕಟ್ಟಡದ ಕಛೇರಿಯು ಸೂಕ್ಷ್ಮ ಪ್ರದೇಶವಾದ ಮಾನ್ಯ ಉಚ್ಚ ನ್ಯಾಯಾಲಯದ ಆವರಣದಲ್ಲಿದ್ದು, ಕಛೇರಿ ಹಾಗೂ ಸಿಬ್ಬಂದಿಗಳ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಸಿ.ಸಿ ಕ್ಯಾಮರಾ ಕಣ್ಣಾವಲಿನ ಸೌಲಭ್ಯ ಕಲ್ಪಿಸಲಾಗಿದ್ದು, ಸಿ.ಸಿ.ಕ್ಯಾಮರಾಗಳು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಇಲಾಖೆಯಿಂದ ಸ್ಥಾಯಿ ಸೂಚನೆ(Standing Instruction) ಇದ್ದರೂ ಸಹ ಅದನ್ನು ಉಲ್ಲಂಘಿಸಿ ಒಬ್ಬ ಸರ್ಕಾರಿ ನೌಕರನಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿರುತ್ತಾರೆ.
ಮೇಲಾಧಿಕಾರಿಗಳ ಗಮನಕ್ಕೆ ತರದೆ ಬೇರೆ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಮೀನಾ, ಸಹಾಯಕ ಇಂಜಿನಿಯರ್ ಇವರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಲೋಕೋಪಯೋಗಿ ವಿಶೇಷ ಕಟ್ಟಡಗಳ ಉಪ ವಿಭಾಗ, ಉಚ್ಚ ನ್ಯಾಯಾಲಯ, ಬೆಂಗಳೂರು ಇಲ್ಲಿ ನಿಯಮ ಬಾಹಿರವಾಗಿ ಆಚರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರದೇ ಸಿ.ಸಿ ಕ್ಯಾಮೆರಾ ಸ್ವಿಚ್ ಆಫ್ ಮಾಡಿರುವುದು ಭದ್ರತಾ ಲೋಪ ಮತ್ತು ಕರ್ತವ್ಯ ಲೋಪವೆಸಗಿರುವುದು ಸಾಭೀತಾಗಿದ್ದು ಈ ಮೂಲಕ ಒಬ್ಬ ಸರ್ಕಾರಿ ನೌಕರನಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿ ಕರ್ನಾಟಕ ರಾಜ್ಯ ನಾಗರೀಕ(ನಡತೆ) ನಿಯಮಗಳು-2021ರ ನಿಯಮ-3(1)(i ರಿಂದ iv)ನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದರಿಂದ ಶ್ರೀ ಜಿ.ಹೆಚ್. ಚಿಕ್ಕೇಗೌಡ, ಪ್ರ.ದ.ಸಹಾಯಕರು, ಶ್ರೀಮತಿ ಲಾವಣ್ಯ ಸ.ಇಂ ಮತ್ತು ಶ್ರೀಮತಿ ಮೀನಾ, ಸ.ಇಂ, ಶ್ರೀ ನವೀನ್ ಸಹಾಯಕ ಇಂಜಿನಿಯರ್, ಸ.ಇಂ ಮತ್ತು ಶ್ರೀ ಅಮೀನ್ ಎಸ್ ಆನದಿನ್ನಿ, ಸ.ಇಂ ಇವರುಗಳ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಸೇವೆಯಿಂದ ಅಮಾನತ್ತುಗೊಳಿಸುವುದು ಸೂಕ್ತವೆಂದು ತೀರ್ಮಾನಿಸಿ ಈ ಮುಂದಿನಂತೆ ಆದೇಶಿಸಿದೆ.
ಇಂಜಿನಿಯರ್, ಸ.ಇಂ ಮತ್ತು ಶ್ರೀ ಅಮೀನ್ ಎಸ್ ಆನದಿನ್ನಿ, ಸ.ಇಂ ರವರುಗಳ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ/ಶಿಸ್ತು ಕ್ರಮವನ್ನು ಬಾಕಿಯಿರಿಸಿ ಕರ್ನಾಟಕ ನಾಗರೀಕ ಸೇವಾ(ಸಿಸಿಎ) ನಿಯಮಗಳು- 1957ರ ನಿಯಮ-10(1)(ಡಿ) ರಸ್ತೆಯ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.
ಶ್ರೀ ಜಿ.ಹೆಚ್. ಚಿಕ್ಕೇಗೌಡ, ಪ್ರ.ದ.ಸಹಾಯಕರು, ಶ್ರೀಮತಿ ಲಾವಣ್ಯ, ಸ.ಇಂ ಮತ್ತು ಶ್ರೀಮತಿ ಮೀನಾ, ಸ.ಇಂ, ಶ್ರೀ ನವೀನ್ ಸಹಾಯಕ ಇಂಜಿನಿಯರ್, ಸ.ಇಂ ಮತ್ತು ಶ್ರೀ ಅಮೀನ್ ಎಸ್ ಆನದಿನ್ನಿ, ಸ.ಇಂ ರವರುಗಳ ಹುದ್ದೆಯ ಲೀನ್ ಅನ್ನು ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು(ದ), ಬೆಂಗಳೂರು ಈ ಕಛೇರಿಗೆ ವರ್ಗಾಯಿಸಲಾಗಿದೆ.
ಅಮಾನತ್ತಿನ ಅವಧಿಯಲ್ಲಿ ಈ ಅಧಿಕಾರಿಗಳು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನವನ್ನು ಬಿಡತಕ್ಕದಲ್ಲ. ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮಗಳು-1958ರ ನಿಯಮ-98ರ ಅನುಸಾರ ಜೀವನಾಧಾರ ಭತ್ಯೆಗೆ ಅವರುಗಳು ಅರ್ಹರಿರುತ್ತಾರೆ ಎಂದು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ(ಸೇವೆಗಳು-ಸಿ) ಹನುಮಂತರಾಜು.ಎ ಸರ್ಕಾರದ ಪರವಾಗಿ ಆದೇಶಿಸಿದ್ದಾರೆ.