ಪೆಟ್ರೋಲ್, ಡೀಸೆಲ್, ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸುವರ್ಣ ಕರ್ನಾಟಕ ವೇದಿಕೆಯಿಂದ ಪ್ರತಿಭಟನೆ

ದಾವಣಗೆರೆ: ಪೆಟ್ರೋಲ್, ಡೀಸೆಲ್, ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸುವರ್ಣ ಕರ್ನಾಟಕ ವೇದಿಕೆಯಿಂದ ಪ್ರತಿಭಟಿಸಲಾಯಿತು.

ಇದೇ ವೇಳೆ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್.ಸಂತೋಷ ಕುಮಾರ ಮಾತನಾಡಿ, ಕೊರೋನಾ ಮೊದಲನೇ ಅಲೆಯಿಂದ ಜರ್ಝರಿತರಾಗಿದ್ದ ಜನರು ಚೇತರಿಸಿಕೊಳ್ಳುವ ಮೊದಲೇ ೨ನೇ ಅಲೆಯು ದೇಶವನ್ನೇ ಬಾಧಿಸುತ್ತಿದೆ. ಕಳೆದ ಬಾರಿಯ ಲಾಕ್‌ಡೌನ್‌ನಿಂದ ಸಂತ್ರಸ್ತರಾಗಿದ್ದವರು ಪ್ರಸ್ತುತ ೨ನೇ ಹಂತದ ಲಾಕ್‌ಡೌನ್ ಕಾರಣಕ್ಕೆ ಇನ್ನಷ್ಟು ಸಂಕಷ್ಟಕ್ಕೆ ಕುಸಿದಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಪದೇಪದೇ ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಏರಿಕೆ ಮಾಡುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸ್ಥಿರವಾಗಿದ್ದರೂ, ಕಳೆದ ೬ ತಿಂಗಳಲ್ಲಿ ೪೭ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ. ದೈನಂದಿನ ಕೆಲಸ-ಕಾರ್ಯಗಳಿಗೆ ಬಡ, ಮಧ್ಯಮ ವರ್ಗದವರೂ ಸಹ ವಾಹನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದ್ದು, ಪೆಟ್ರೋಲ್ ದರ ಏರಿಕೆಯಿಂದಾಗಿ ಸರ್ಕಾರ ಜನರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ‌ ಎಂದು ಹರಿಹಾಯ್ದರು.

ಡೀಸೆಲ್ ಬೆಲೆ ಏರಿಕೆಯಿಂದ ಸಹಜವಾಗಿಯೇ ಸಾಗಾಣಿಕೆ ವೆಚ್ಚ ಹೆಚ್ಚಾಗಲಿದ್ದು, ಅಗತ್ಯ ವಸ್ತುಗಳ ಬೆಲೆಯೂ ಗಣನೀಯವಾಗಿ ಏರಿಕೆ ಕಾಣಲಿದೆ. ಅಂತಿಮವಾಗಿ ಇದು ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಉಂಟುಮಾಡುತ್ತದೆ ಎಂದು ಅವರು ಆತಂಕ  ವ್ಯಕ್ತಪಡಿಸಿದರು. ರೈತಾಪಿ ಜನರು ಉತ್ಪನ್ನಗಳ ಸಾಗಾಣಿಕೆ, ಜಮೀನು ಉಳುಮೆ ಮಾಡಲು ಬಳಸುವ ಟ್ರಾಕ್ಟರ್,ಕೃಷಿ ಯಂತ್ರೋಪಕರಣಗಳಿಗೂ ಪೆಟ್ರೋಲ್, ಡೀಸೆಲ್ ಅಗತ್ಯವಾಗಿದ್ದು, ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದಿರುವ ಸಂದರ್ಭದಲ್ಲಿ ಇಂಧನ ದರ ಏರಿಕೆಯು ಕೃಷಿಕರಿಗೂ ದೊಡ್ಡ ಹೊಡೆತ ನೀಡಲಿದೆ. ಕಳೆದ ಲಾಕ್‌ಡೌನ್ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ ದರ ಏರಿಸಿದ್ದ ಸರ್ಕಾರ, ಇದೀಗ ಮತ್ತೆ ಬೆಲೆ ಏರಿಸುವ ಮೂಲಕ ಜನರಿಗೆ ಶಾಕ್ ನೀಡಿದೆ. ಕಳೆದ 2 ತಿಂಗಳಿನಿಂದ ಬಹುತೇಕ ಜನರು ಲಾಕ್‌ಡೌನ್ ಕಾರಣಕ್ಕೆ ಮನೆಯಲ್ಲಿದ್ದು, ಆದಾಯ ಮೂಲವಿಲ್ಲದೆ ಕಷ್ಟದಲ್ಲಿ ಬದುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಧಾವಿಸಬೇಕಿದ್ದ ಸರ್ಕಾರಗಳು, ಪ್ರಜೆಗಳನ್ನು ಮತ್ತಷ್ಟು ಕಷ್ಟಕ್ಕೆ ಸಿಲುಕಿಸುವಂತಹ ತಪ್ಪು ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೊರೋನಾ ಸಂಕಷ್ಟ, ಸಾವು-ನೋವು, ಆರ್ಥಿಕ ಸಮಸ್ಯೆಗಳಿಂದ ಕುಗ್ಗಿ ಹೋಗಿರುವ ಜನರು ಬೆಲೆ ಏರಿಕೆ ಪರಿಸ್ಥಿತಿಯನ್ನು ನಿಭಾಯಿಸುವುದಾದರೂ ಹೇಗೆ? ಆದ್ದರಿಂದ ತಕ್ಷಣವೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್, ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ದುಡಿಮೆ ಇಲ್ಲದೆ ಸಂಕಷ್ಟದಲ್ಲಿರುವ ಜನರ ಪುನಶ್ಚೇತನಕ್ಕೆ ಸಾಧ್ಯವಾದ ಉಪಕ್ರಮ ಕೈಗೊಳ್ಳಲು ಯೋಜನೆ ರೂಪಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಪೆಟ್ರೋಲ್, ಡೀಸೆಲ್ ಬೆಲೆಯನ್ನು ತತ್ ಕ್ಷಣದಿಂದಲೇ ಅನ್ವಯವಾಗುವಂತೆ ಇಳಿಕೆ  ಮಾಡಬೇಕು. ಜನರಿಗೆ ಹೊರೆಯಾಗದಂತೆ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಬೇಕು. ಹೆಚ್ಚಿಸಿರುವ ವಿದ್ಯುತ್ ದರವನ್ನು ತಕ್ಷಣವೇ ಹಿಂಪಡೆದು, ಲಾಕ್‌ಡೌನ್ ಅವಧಿಯಲ್ಲಿನ ವಿದ್ಯುತ್ ಬಿಲ್‌ನ್ನು ಮನ್ನಾ ಮಾಡಬೇಕು. ಅಡುಗೆ ಎಣ್ಣೆ, ಬೇಳೆ ಕಾಳು, ದಿನಸಿ ಪದಾರ್ಥ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ಬಡಜನರ ಅನುಕೂಲಕ್ಕಾಗಿ ಅಡುಗೆ ಅನಿಲ ಸಿಲಿಂಡರ್‌ಗೆ ನೀಡುತ್ತಿದ್ದ ಸಬ್ಸಿಡಿ ಮುಂದುವರೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಂಘಟನೆ ಮುಖಂಡರಾದ ಶಾಂತಕುಮಾರ ದೊಡ್ಡಮನಿ, ಬಿ.ಎಸ್.ಜಗದೀಶ, ಕಣವೇಶ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!