ಆದಿತ್ಯ ನಾಯಕರಾಗಿ ನಟಿಸುತ್ತಿರುವ “ಟೆರರ್”
ಸಿನಿಮಾ: ಶ್ರೀಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಆರಂಭವಾಯಿತು ಆದಿತ್ಯ ಅಭಿನಯದ “ಟೆರರ್” .
ಸಿಲ್ಕ್ ಮಂಜು ನಿರ್ಮಿಸುತ್ತಿರುವ, ರಂಜನ್ ಶಿವರಾಮ ಗೌಡ ನಿರ್ದೇಶನದ ಹಾಗೂ ಆದಿತ್ಯ ನಾಯಕರಾಗಿ ನಟಿಸುತ್ತಿರುವ
“ಟೆರರ್” ಚಿತ್ರದ ಮುಹೂರ್ತ ಸಮಾರಂಭ ಶ್ರೀಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನಡೆಯಿತು. ಕೆ ಆರ್ ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಐ ಪಿ ಎಸ್ ಅಧಿಕಾರಿ ರವಿಕಾಂತೇಗೌಡ ಅವರು ಕ್ಯಾಮೆರಾ ಚಾಲನೆ ಮಾಡಿದರು. ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಲಹರಿ ವೇಲು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.
ನನ್ನ ಮೊದಲ ನಿರ್ದೇಶನದ ಚಿತ್ರ. ಹೊಸ ಮಾಫಿಯಾ ಸುತ್ತ ಕಥೆ ಇದೆ. ಆದಿತ್ಯ ಅವರಿಗೆ ಕಥೆ ಇಷ್ಟವಾಯಿತು. ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯುತ್ತದೆ. ಸಿಲ್ಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನೀಡಲಿದ್ದಾರೆ. ಕಾರ್ತಿಕ್ ಶರ್ಮ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಸಂಕಲನ ನಮ್ಮ ಚಿತ್ರಕ್ಕಿದೆ. ಧರ್ಮ, ಪ್ರಮೋದ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ನಿರ್ದೇಶಕ ರಂಜನ್ ಶಿವರಾಮ ಗೌಡ ತಿಳಿಸಿದರು.
ನಮ್ಮ “A” ಚಿತ್ರ ಬಿಡುಗಡೆಯಾಗಿ ಇಂದಿಗೆ ಸರಿಯಾಗಿ ಇಪ್ಪತ್ತೈದು ವರ್ಷಗಳಾಯಿತು. ಹಾಗಾಗಿ ಇಂದು “ಟೆರರ್” ಚಿತ್ರ ಆರಂಭಿಸಿದ್ದೇವೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ ಎಂದರು ನಿರ್ಮಾಪಕ ಸಿಲ್ಕ್ ಮಂಜು.
ನಟ ಧರ್ಮ ಅವರ ಮೂಲಕ ರಂಜನ್ ಅವರ ಪರಿಚಯವಾಯಿತು. ಅವರು ಹೇಳಿದ ಕಥೆ ಬಹಳ ಹಿಡಿಸಿತು. ಈ ಚಿತ್ರದಲ್ಲಿ ಎರಡು ಶೇಡ್ ಗಳಲ್ಲಿರುತ್ತದೆ. ಪಾತ್ರ ಬಹಳ ಸ್ಟೈಲಿಶ್ ಆಗಿರುತ್ತದೆ. ಯಂಗ್ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರು ನಾಯಕ ಆದಿತ್ಯ.
ಅತಿಥಿಗಳಾಗಿ ಆಗಮಿಸಿದ್ದ ಲಹರಿ ವೇಲು, ಜೇಡ್ರಳ್ಳಿ ಕೃಷ್ಣಪ್ಪ ಮುಂತಾದ ಗಣ್ಯರು, ಚಿತ್ರದಲ್ಲಿ ನಟಿಸಿರುವ
ನಟ ಧರ್ಮ, ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್, ಛಾಯಾಗ್ರಾಹಕ ಕಾರ್ತಿಕ್ ಶರ್ಮ ಮುಂತಾದವರು “ಟೆರರ್” ಬಗ್ಗೆ ಮಾತನಾಡಿದರು.