ತಳ ಸಮುದಾಯದವರ ಸಮಸ್ಯೆಗಳ ಪರಿಹಾರಕ್ಕೆ ಕೆಪಿಸಿಸಿ ಅದ್ಯಕ್ಷರ ಸಂವಾದ.! ಇದು ಡಿಕೆಶಿಯ ಚುನಾವಣಾ ಅಸ್ತ್ರನಾ..?

ದಾವಣಗೆರೆ: ತಳ ಸಮುದಾಯದ ಸಮಸ್ಯೆ ಅರಿತು ಪರಿಹಾರ ಕಂಡುಕೊಡುವ ಉದ್ದೇಶದಿಂದ ಸಂವಾದ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಸೂರಗೊಂಡನಕೊಪ್ಪದಲ್ಲಿ ಲಂಬಾಣಿ ಸಮುದಾಯದೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದ ನಂತರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೀನುಗಾರರನ್ನು ಭೇಟಿ ಮಾಡಲಾಗಿದ್ದು, ಈ ಲಂಬಾಣಿ ಸಮುದಾಯ, ನಂತರ ನೇಕಾರ ಸಮುದಾಯವನ್ನು ಭೇಟಿ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ತಳ ಸಮುದಾಯಗಳನ್ನು ಭೇಟಿಯಾಗುತ್ತಿದ್ದೇನೆ. ಮೀನುಗಾರರ ಸಮುದಾಯವನ್ನು ಈಗಾಗಲೇ ಭೇಟಿಯಾಗಿದ್ದೇನೆ ಎಂದರು.
ಕೇವಲ ನನ್ನಿಂದ ಮಾತ್ರ ಲಂಬಾಣಿ ಸಮುದಾಯದ ಸಮಸ್ಯೆ ಪರಿಹಾರವಾಗಲ್ಲ. ಸಮುದಾಯದ ಸಹಕಾರದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಬಗರ್ ಹುಕುಂ, ವಲಸೆ ಕಾರ್ಮಿಕರ ಸಮಸ್ಯೆ, ವಿದ್ಯಾಭ್ಯಾಸ, ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು, ವಲಸೆ ತಪ್ಪಿಸಲು ಪರಿಹಾರ ಮಾರ್ಗ ಮೊದಲಾದ ವಿಚಾರಗಳ ಸಮಸ್ಯೆ ಕುರಿತು ಚರ್ಚೆಯಾಗಿದೆ ಎಂದು ತಿಳಿಸಿದರು.
ಬಗರ್ ಹುಕುಂ ನಿಯಮಾವಳಿಗಳನ್ನು ಎಸ್ಸಿ ಸಮುದಾಯದಂತೆ ಸಡಿಲಗೊಳಿಸಿ, ಸಾಗುವಳಿ ಅವಧಿಯನ್ನು ಕಡಿತಗೊಳಿಸಬೇಕು. ಯಾವುದೇ ಸಮಾಜದ ಅನ್ನಕ್ಕೆ ಅಡ್ಡಿಯಾಗದಂತೆ ಕಾರ್ಯಕ್ರಮ ರೂಪಿಸುತ್ತೇನೆ ಎಂದು ಭರವಸೆ ನೀಡಿದರು.
ತಾಂಡಗಳಿಗೆ ಭೇಟಿ ನೀಡಿ ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತೇನೆ. ಲಂಬಾಣಿ ಸಮಾಜದ ತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಬಂಜಾರ ಸಮುದಾಯದವರ ಧ್ವನಿಯಾಗಿ ಸರ್ಕಾರದಲ್ಲಿ ಕೆಲಸ ಮಾಡುತ್ತೇವೆ. ಮುಂದೆ ನಾವೇ ಅಧಿಕಾರ ಚುಕ್ಕಾಣಿ ಹಿಡಿದಾಗ ಅವರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುಯುತ್ತೇವೆ ಎಂದು ಭರವಸೆ ನೀಡಿದರು.