ಐಪಿಎಸ್ ಅಧಿಕಾರಿ ಭೀಮಾಶಂಕರ ಗುಳೇದ ವಿರುದ್ಧ ದಾಖಲಾಗಿದ್ದ ಪ್ರಕರಣಗಳು ವಜಾ
ಬೆಂಗಳೂರು: ಲೈಂಗಿಕ ಕಿರುಕುಳ, ಅಕ್ರಮ ಹಣ ವರ್ಗಾವಣೆ, ಬೇನಾಮಿ ಹಾಗೂ ಭ್ರಷ್ಟಾಚಾರ ಆರೋಪದಡಿ ಐಪಿಎಸ್ ಅಧಿಕಾರಿ ಭೀಮಾಶಂಕರ ಎಸ್. ಗುಳೇದ್ ವಿರುದ್ಧದ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭೀಮಾಶಂಕರ ಗುಳೇದ್ ಕಾರ್ಯಕ್ರಮವೊಂದಕ್ಕೆ ಫೋಟೊಗ್ರಾಫರ್ ಸೇವೆ ಕೋರಲು ದೂರುದಾರ ಎಂಜಿನಿಯರ್ ಸ್ಥಾಪಿಸಿದ್ದ ಸ್ಟುಡಿಯೊಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಸ್ಟುಡಿಯೊದ ಸಹ ಪಾಲುದಾರೆಯಾದ ಪತ್ನಿ ಜೊತೆಗೆ ಗುಳೇದ್ ಅವರ ಸ್ನೇಹ ಬೆಳೆಸಿ, ಲೈಂಗಿಕ ಸಂಪರ್ಕ ಹೊಂದಿದ್ದರು. ಇದನ್ನು ಪತ್ನಿಯ ಮೊಬೈಲ್‌ನಲ್ಲಿ ಗುಳೇದ್ ಸೆರೆ ಹಿಡಿದಿದ್ದರು. ಇದು ನನಗೆ ಗೊತ್ತಾಗಿತ್ತು. ಫೋಟೊಗಳನ್ನು ಡಿಲಿಟ್ ಮಾಡುವಂತೆ ಗುಳೇದ್ ನನಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದ ದೂರುದಾರ ಪತಿ ಬೆಂಗಳೂರಿನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಮತ್ತೊಂದು ಪ್ರಕರಣದಲ್ಲಿ, ‘ಗುಳೇದ್ ಮತ್ತು ಕರ್ನಾಟಕ ರಾಜ್ಯ ಹಣಕಾಸು ಆಯೋಗದ (ಕೆಎಸ್‌ಎಫ್‌ಸಿ) ಇಬ್ಬರು ಅಧಿಕಾರಿಗಳು ಸೇರಿಕೊಂಡು ಪತ್ನಿಗೆ ಸಾಲ ಕೊಡಿಸಿದ್ದರು. ಆ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ್ದು, ಬೇನಾಮಿ ಹೆಸರಿನಲ್ಲಿ ‘ನ್ಯೂ ಪ್ರೊ ಸ್ಟುಡಿಯೊ’ ಮತ್ತು ‘ಈವೆಂಟ್ಸ್’ ಉದ್ಯಮ ಆರಂಭಿಸಿದ್ದರು’ ಎಂದು ಆಕ್ಷೇಪಿಸಿ ಖಾಸಗಿ ದೂರನ್ನು ಸಲ್ಲಿಸಲಾಗಿತ್ತು. ಈ ಎರಡೂ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಲು ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರ ಗುಳೇದ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣಾ ನ್ಯಾಯಾಲಯವು ನನ್ನ ವಿರುದ್ಧದ ಎರಡು ಖಾಸಗಿ ದೂರುಗಳನ್ನು ವಿಚಾರಣೆಗೆ ಪರಿಗಣಿಸಿರುವುದನ್ನು ವಜಾಗೊಳಿಸಬೇಕು ಎಂದು ಕೋರಿ ಭೀಮಾಶಂಕರ ಗುಳೇದ್ ಸಲ್ಲಿಸಿದ್ದ ಎರಡೂ ಅರ್ಜಿಗಳನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
ದೂರುದಾರರ ಪತ್ನಿಯೇ ಅಕ್ರಮ ಸಂಬಂಧದ ಚಿತ್ರ ಮತ್ತು ವಿಡಿಯೊಗಳನ್ನು ರೆಕಾರ್ಡ್ ಮಾಡಿ ಅವುಗಳನ್ನು ಡಿಲಿಟ್ ಮಾಡಿದ್ದಾರೆ. ಹಾಗಾಗಿ, ಆರೋಪಿ ಗುಳೇದ್ ಅವುಗಳನ್ನು ನಾಶ ಮಾಡಿದ್ದಾರೆ ಎಂಬುದು ಸರಿಯಲ್ಲ. ಮೊಬೈಲ್‌ನಲ್ಲಿನ ಕೆಲವು ಅಹಿತಕರ ಚಿತ್ರಗಳಿಗೆ ಪತಿ-ಪತ್ನಿಯರ ನಡುವೆ ಕಲಹವಾಗಿದೆ. ಅದಕ್ಕೆ ಗುಳೇದ್ ಅವರು ಬೆದರಿಕೆ ಹಾಕಿದ್ದಾರೆ ಎನ್ನುವುದನ್ನು ಒಪ್ಪಲಾಗದು ಎಂದು ನ್ಯಾಯಪೀಠ ಹೇಳಿದೆ.
ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಪಿಎಂಎಲ್ ಕಾಯ್ದೆಯ ಕಲಂ 45ರ ಅಡಿ ಪ್ರತಿವಾದಿಯಾಗಿರುವ ದೂರುದಾರ ಸಲ್ಲಿಸಿರುವ ದೂರು ಊರ್ಜಿತವಲ್ಲ. ವಿಚಾರಣಾ ನ್ಯಾಯಾಲಯವು ಅಪರಾಧವನ್ನು ಸಂಜ್ಞೇಯ ಎಂದು ಪರಿಗಣಿಸುವಂತಿಲ್ಲ ಮತ್ತು ಸಾಕ್ಷ್ಯ ದಾಖಲು ಮಾಡಲು ಆದೇಶಿಸಲಾಗದು. ಪಿಎಂಎಲ್ ಕಾಯ್ದೆಯ ಕಲಂ 3, 4 ಮತ್ತು 5ರ ಅಡಿ ಜಾರಿ ನಿರ್ದೇಶನಾಲಯದ ನಿರ್ದೇಶಕರೇ ದೂರು ದಾಖಲಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.