ಕೊಟ್ಟೂರು ಗುರುಬಸವನ ರಥ ಜಗಕ್ಕೆಲ್ಲ ತೋರಲಿ ಸತ್ಪಥ ಸತ್-ಚಿಂತನೆಗಳು ಕೊಂಡೊಯ್ಯಲಿ ದಿಗ್-ದಿಗಂತ ಲೋಕದ ಜನಕಾಗಲಿ ಹೃದ್ಗತ

ಚಿರಂತನ ಹಣತೆಯಾಗಿರುವ ಕೊಟ್ಟೂರೇಶನನ್ನು ಒಡಲೊಳಗೆ ಆರಾಧಿಸುವ ಸಕಲ ಜೀವಪರಾತ್ಮಗಳಿಗೆ ಶುದ್ಧಾಂತ:ಕರಣದ ನಮನಗಳು.
ಆಧ್ಯಾತ್ಮಿಕ ಚಳುವಳಿಗೆ ಕೊಟ್ಟೂರನ್ನು ನೆಲೆಯಾಗಿಸಿಕೊಂಡು ಸಮಾಜಕಲ್ಯಾಣವನ್ನು ರೂಪಿಸಿದ ಜೀವಪರ ಆಲೋಚನೆಗಳ ಮಹಾ ಸಾಧಕ ಕೊಟ್ಟೂರು ಗುರುಬಸವೇಶನ ರಥೋತ್ಸವವು ಇದೇ ತಿಂಗಳ 25ರಂದು ಮೂಲ ನಕ್ಷತ್ರದ ಘಳಿಗೆಯಲ್ಲಿ ಪ್ರಭುತ್ವದ ಕಾಠಿಣ್ಯ ನಿಯಮಗಳನ್ನು ಪಾಲಿಸಿ ಭಕ್ತಿ,ಹರ್ಷದಿಂದ ತೇರನೆಳೆಯೋಣ.
ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದ ಬಸವಾದಿ ಪ್ರಮಥರ ನಿರಂತರತೆಯನ್ನು ಜತನದಿಂದ ಕಾಯಕ ದಾಸೋಹ ಜಂಗಮಾರ್ಚನೆ ಹಾಗೆಯೇ ಸಹನಾ ಧರ್ಮ,ಬಹುತ್ವ ಸೌಹಾರ್ದತೆಯನ್ನು ಅನಂತವಾಗಿಸಿದವರು.
ಕೊಟ್ಟೂರೇಶನಲ್ಲಿಮಹಾಮೌನದ ಮಧ್ಯೆ ನಿರುಮ್ಮಳ ನಗುವಿನ ಬುದ್ಧ,ಕೆಣಕುವ ವಿಡಂಬಿಸುವ ಸೂಫಿಸಂತರು,ಬದ್ಧತಾಪೂರ್ಣ ಪೈಗಂಬರರ ಸ್ಥಿತಪ್ರಜ್ಞಾಭಾವ,ನಿರ್ಮಲಪ್ರೇಮದ ದ್ಯೋತಕ ಜೀಸಸ್ ಮುನ್ನೋಟ, ಭವಬಂಧನ ಕಳಚಿದ ಮಹಾವೀರನ ಪ್ರಶಾಂತತೆ ಮತ್ತು ದೇವರೆಡೆಗಿನ ಸುಲಭದ ದಾರಿತೋರಿದ ಕಬೀರನ ನಿಶ್ಚಲತೆಗಳೆಲ್ಲವುಗಳನ್ನು ಋಷಿ ಸದೃಶವನ್ನು ಮೇರು ವ್ಯಕ್ತಿತ್ವವನ್ನು ಕೊಟ್ಟೂರೇಶನಲ್ಲಿ ಆವಿರ್ಭಾವಗೊಂಡಿದೆ.ಐಹಿಕದ ತವಕ ತಲ್ಲಣ,ಸ್ವಾರ್ಥಲಾಲಸೆ,ಅಪರಿಮಿತ ಪರಿಗ್ರಹ,ಅಧಿಕಾರದ ಕೊಳ್ಳುಬಾಕುತನದಂತಹ ಗಾಢಾಂಧಕಾರವನ್ನು ಸೀಳುವ,ಕಳೆಯುವ,ಭೇದಿಸುವ ದಿಶೆಯಲ್ಲಿ ಚಿತ್ಪ್ರಕಾಶವಾಗುತ್ತಾರೆ.
ರಥದ ನೆಪದಲ್ಲಿ ಕೇಂದ್ರ,ರಾಜ್ಯ ಸರ್ಕಾರ, ಸಂಘಸಂಸ್ಥೆಗಳಿಗೆ ಈ ಕೆಳಗಿನ ಅಹವಾಲು ಸಲ್ಲಿಸೋಣ.
1)ವಿಶ್ವವಿದ್ಯಾನಿಲಯಗಳಲ್ಲಿ ಕೊಟ್ಟೂರು ಗುರು ಬಸವಅಧ್ಯಯನ ಪೀಠ
2)ವಿಜಯಪುರ-ಬೆಂಗಳೂರು ರೈಲ್ವೆ ಸಂಚಾರಕ್ಕೆ ಕೊಟ್ಟೂರು ಬಸವ ಎಕ್ಸ್ಪ್ರೆಸ್
3)ಪಟ್ಟಣದ ಹೊರವಲಯದಲ್ಲಿ ಕೊಟ್ಟೂರೇಶನ ಸಮಗ್ರ ಐತಿಹ್ಯವನ್ನು ಪ್ರತಿಬಿಂಬಿಸುವ ಶಿಲ್ಪಕಲಾಕೃತಿಗಳು,ಉದ್ಯಾನವನ ನಿರ್ಮಾಣ
4) ಶಾಲೆಗಳಲ್ಲಿ ಈ ಮಹಾತ್ಮನ ಕುರಿತು ಪಠ್ಯ
5)ಕೊಟ್ಟೂರು ಗುರು ಬಸವ ನಾಣ್ಯ
6)ಸಂಗೀತ ನೃತ್ಯ ಅಕಾಡೆಮಿ ನಾಟಕ ಅಕಾಡೆಮಿಗಳಿಂದ ಈತನ ಸಾಧನೆ,ಗೀತೆ, ಸ್ತೋತ್ರ ಸಂಕಥನಗಳನ್ನು ಮೂಡಿಸುವ ನಾಟಕ ನೃತ್ಯ ಪ್ರದರ್ಶನ
7)ಕೊಟ್ಟೂರಿಗೆ ದಾಸೋಹ ನಗರಿ ಎಂಬ ನಾಮಕರಣ.8) ಕೊಟ್ಟೂರಿನ ಬಾಲಕಿಯರ ಪ್ರೌಢ ಶಾಲೆಯನ್ನು ಉನ್ನತೀಕರಿಸಿ ನಂಬಿಯಕ್ಕ ಪದವಿಪೂರ್ವ ಕಾಲೇಜು ಎಂಬ ಘೋಷಣೆ.
ಈ ಮೇಲಿನ ನನ್ನ ನಿಮ್ಮ ಸಾತ್ವಿಕ ವಿನಂತಿಗಳನ್ನು ಸರ್ಕಾರವು ಉನ್ನತ ಮಟ್ಟದ ಸಮಿತಿ ರಚಿಸಿ ಅನುಷ್ಟಾನದ ಪ್ರತೀಕ್ಷೆಗೆ ಸಂಕಲ್ಪಿಸೋಣ.
ಮತ್ತೆಮತ್ತೆ ಮಾನವತೆಯ ಪಾಠ ಕಲಿಯೋಣ.ಜೊತೆ ಜೊತೆಗೆ ಚಲನೆಯ ಸಂಕೇತಿಸುವ ಮಹಾಮಹಿಮ ಕೊಟ್ಟೂರು ಗುರು ಬಸವೇಶ್ವರರ ರಥೋತ್ಸವದ ಈ ಸಂಭ್ರಮ ದ ಘಳಿಗೆಯು ಭಕ್ತಿಯ ಪುಳಕ ನೀಡುವುದರ ಜೊತೆಗೆ ನಿಮ್ಮ ಸುಂದರ ಕನಸುಗಳು ಭವಿತವ್ಯದಲ್ಲಿ ಸಾಕಾರಗೊಳ್ಳಲಿ.
ನಿಮ್ಮೆಲ್ಲರ ನಿರ್ಮಲಾತ್ಮಗಳಿಗೆ ಪ್ರಣಾಮಗಳು.
ಬರಹ: ಪ್ರಕಾಶ ಅಂಗಡಿ ಮತ್ತಿಹಳ್ಳಿ
ಚಿತ್ರಕೃಪೆ:ವಜೀರ್ ಆಹ್ಮದ್ ಮತ್ತು ಅಜಯ್ ಕೊಟ್ಟೂರು ಪ್ರೌಢಶಾಲಾ ಶಿಕ್ಷಕರು
ಲಿಪಿ ಜೋಡಣೆ: ತಿಪ್ಪೇಸ್ವಾಮಿ ಗುಣಸಾಗರ ಶಿಕ್ಷಕರು