‘ಮತಾಂತರ ಕಾಯ್ದೆ’: ಸಂಪುಟ ತೀರ್ಮಾನದ ನಂತರವೇ ಕಾಯ್ದೆ ಎಂದ ಸಿಎಂ
ಬೆಳಗಾವಿ: ವಿರೋಧ ಪಕ್ಷದವರು ಪ್ರಸ್ತಾಪ ಮಾಡುವ ವಿಷಯಗಳಿಗೆ ಸಮರ್ಪಕ ಉತ್ತರ ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ವಿಮಾನ ನಿಲ್ದಾಣ ಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲವಾರು ಕಾನೂನುಗಳನ್ನು ತರುವುದು , ಜನಪರವಾದ ಅಭಿವೃದ್ಧಿಯ ಕುರಿತು ಚರ್ಚೆ ಮಾಡಿ ಅದಕ್ಕೆ ಪರಿಹಾರ ದೊರಕಿಸುವುದು ಸರ್ಕಾರದ ಆದ್ಯತೆ. ಸಮಗ್ರ ಕರ್ನಾಟಕದ ಜೊತೆಗೆ ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಯ ವಿಚಾರ ಹಾಗೂ ಯೋಜನೆಗಳ ಬಗ್ಗೆ ಚರ್ಚೆ ಆಗಬೇಕೆನ್ನುವುದು ನಮ್ಮ ಉದ್ದೇಶ ಎಂದರು.
ಮತಾಂತರ ಕಾಯ್ದೆಯನ್ನು ವಿರೋಧಿಸುವುದಾಗಿ ವಿರೋಧ ಪಕ್ಷಗಳ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯ ಮಂತ್ರಿಗಳು, ಹಲವಾರು ಕಾನೂನುಗಳ ಬಗ್ಗೆ ಪರ-ವಿರೋಧ ಇದ್ದೇ ಇರುತ್ತದೆ. ಸರ್ಕಾರ ಜನಹಿತಕ್ಕಾಗಿ ಕಾನೂನು ಗಳನ್ನು ತರಲೇಬೇಕಾಗುತ್ತದೆ. ಈ ಕುರಿತು ಚರ್ಚೆ ಮಾಡುತ್ತೇವೆ ಎಂದರು.
ವಿರೋಧ ಪಕ್ಷದವರಿಗೆ ವಿಧಾನ ಮಂಡಲದ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶವಿದೆ. ಅವರು ಯಾವುದೇ ವಿಚಾರಗಳನ್ನು ಎತ್ತಿದರೂ ಕೂಡ ವಾಸ್ತವದ ನೆಲೆಗಟ್ಟಿನ ಮೇಲೆ ಸರ್ಕಾರ ಸಮರ್ಪಕವಾಗಿ ಉತ್ತರ ನೀಡಲಿದೆ ಎಂದರು.
ಮತಾಂತರ ಕಾಯ್ದೆ ಕಾನೂನು ಇಲಾಖೆಯ ಪರಿಶೀಲನಾ ಸಮಿತಿಯಲ್ಲಿದ್ದು, ಒಪ್ಪಿಗೆಯಾಗಿ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಬೇಕು ನಂತರ ಸದನದಲ್ಲಿ ಮಂಡಿಸಲಾಗುವುದು ಎಂದವರು ತಿಳಿಸಿದರು.