ಗಣರಾಜ್ಯದ ಮೌಲ್ಯಗಳ ಸಂರಕ್ಷಣೆಯೇ ನಾವು ಸಂವಿಧಾನಕ್ಕೆ ಸಲ್ಲಿಸುವ ಗೌರವ — ಜಿ.ಜಿ.ದೊಡ್ಡಮನಿ

ದಾವಣಗೆರೆ: ಭಾರತ ದೇಶವು ಗಣರಾಜ್ಯದ ಮೌಲ್ಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿರುವ ದೇಶವಾಗಿದೆ ಹಾಗೂ ನಮ್ಮ ದೇಶದ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದುದಾಗಿದೆ. ಇಂದು ನಾವು ಅನುಭವಿಸುತ್ತಿರುವ ಮೂಲಭೂತ ಹಕ್ಕುಗಳು ಸಂವಿಧಾನ ನೀಡಿರುವ ಕೊಡುಗೆಯಾಗಿದೆ. ನಮ್ಮ ದೇಶವು ಸರ್ವ ಶ್ರೇಷ್ಠ ಸಂವಿಧಾನವನ್ನು ಹೊಂದಲು ಕಾರಣೀಕರ್ತರಾದ ಡಾ.ಬಿ.ಆರ್.ಅಂಬೇಡ್ಕರ್ ಆದಿಯಾಗಿ ಎಲ್ಲ ಮಹನೀಯರನ್ನು ನಾವು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸುವುದು ಮತ್ತು ಸಂವಿಧಾನದ ಆಶಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪರಿಪಾಲನೆ ಮಾಡುವುದೇ ಸಂವಿಧಾನಕ್ಕೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಕೆನರಾ ಬ್ಯಾಂಕಿನ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಜಿ.ಜಿ.ದೊಡ್ಡಮನಿ ಹೇಳಿದರು. ಅವರಿಂದು ದಾವಣಗೆರೆಯ ಡಿ.ಸಿ.ಎಮ್.ಟೌನ್‌ಶಿಪ್‌ನಲ್ಲಿ ಕೆನರಾ ಬ್ಯಾಂಕಿನ ಲೀಡ್ ಬ್ಯಾಂಕ್ ಕಛೇರಿ ಮತ್ತು ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವತಿಯಿಂದ ಜಂಟಿಯಾಗಿ ಆಯೋಜಿಸಿದ್ದ 74 ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜ ಅನಾವರಣಗೊಳಿಸಿ ಮಾತಾಡುತ್ತಿದ್ದರು.
ಕೆನರಾ ಬ್ಯಾಂಕಿನ ನೌಕರರ ಸಂಘದ ರಾಷ್ಟ್ರೀಯ ಸಹ ಖಜಾಂಚಿ ಕೆ.ರಾಘವೇಂದ್ರ ನಾಯರಿಯವರು ಮಾತನಾಡಿ ಇಂದು ಬ್ರಿಟೀಷ್ ಆಳ್ವಿಕೆಯಿಂದ 1947 ರಲ್ಲಿ ಸ್ವಾತಂತ್ಯಗೊಂಡ ಬಳಿಕ 1950 ಜನವರಿ 26 ರಂದು ಸಂವಿಧಾನವನ್ನು ಅಂಗೀಕರಿಸಿ, ಆಡಳಿತದಲ್ಲಿ ಅಳವಡಿಸಿಕೊಂಡು ಗಣರಾಜ್ಯವೆನಿಸಿಕೊಂಡ ಪವಿತ್ರ ದಿನವಾಗಿದೆ. ಇಂದು ನಮ್ಮ ದೇಶದಲ್ಲಿ ವಿವಿಧ ಭಾಷೆ, ಧರ್ಮ, ಪಂಥ, ವಿಚಾರಧಾರೆಗಳು ಇದ್ದರೂ ದೇಶದ ಪ್ರಶ್ನೆ ಬಂದಾಗ ಏಕ ಸೂತ್ರದಡಿ ಸಾಗುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ಶಕ್ತಿಯಾಗಿದೆ. ಸಂವಿಧಾನದ ಆಶಯಗಳು ಕೇವಲ ಪುಸ್ತಕಗಳಲ್ಲಿ, ಭಾಷಣಗಳಲ್ಲಿ ಮಾತ್ರ ವಿಜೃಂಭಿಸಬಾರದು. ನಿಜ ಜೀವನದಲ್ಲೂ ಅಳವಡಿಕೆಯಾದಾಗ ಮಾತ್ರ ನಾವು ಸಂವಿಧಾನಕ್ಕೆ ಸಲ್ಲಿಸುವ ಶ್ರೇಷ್ಠ ಗೌರವವಾಗಲಿದೆ ಎಂದರು.
ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾದರು.
ಕೆನರಾ ಬ್ಯಾಂಕ್ ಲೀಡ್ ಬ್ಯಾಂಕ್ ಕಛೇರಿಯ ಸಿಬ್ಬಂದಿಗಳಾದ ಸುಧೀರ್ ರೆಡ್ಡಿ, ಮೂರ್ತಿ ನಾಯ್ಕ್, ಅನಿಲ್, ಶ್ರೀಧರ, ನಂಜಂಡ ಉಪಸ್ಥಿತರಿದ್ದರು.
ಜಿ.ಜಿ.ದೊಡ್ಡಮನಿ
ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕರು
ಕೆನರಾ ಬ್ಯಾಂಕ್
ಡಿಸಿಎಮ್ ಟೌನ್‌ಶಿಪ್
ದಾವಣಗೆರೆ.