‘ಕಳ್ಳರ ಬಾಯಿ ದೊಡ್ಡದು’ || ‘ಭೂತದ ಬಾಯಿಯಲ್ಲಿ ಭಗವದ್ಗೀತೆ’ ಕಾಂಗ್ರೆಸ್ ಆರೋಪಕ್ಕೆ ಟಾಂಗ್ ನೀಡಿದ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್

ದಾವಣಗೆರೆ: ಪುರಸಭೆಯಾಗಿದ್ದ ದಾವಣಗೆರೆ ನಗರವನ್ನು ನಗರಸಭೆ ಮಾಡಿ ನಂತರ ಮಹಾ ನಗರಪಾಲಿಕೆಯಾಗಿ ಮಾಡಿ ಇದೀಗ ಸ್ಮಾರ್ಟ್ ಸಿಟಿಯಾಗಿ ಮೇಲ್ದರ್ಜೆಗೆ ಏರಿಸುವಲ್ಲಿ ಸಂಸದರಾದ ಜಿ.ಎಂ.ಸಿದ್ದೇಶ್ವರ ಮತ್ತು ಮಾಜಿ ಸಂಸದರಾದ ಜಿ.ಮಲ್ಲಿಕಾರ್ಜುನಪ್ಪನವರು ಈ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಶ್ರಮವನ್ನು ಮರೆತು ಅವರ ಮೇಲೆ ಆರೋಪ ಮಾಡುವುದು ಎಷ್ಟು ಸರಿ? ಬಹುಶಃ ದೊಡ್ಡವರ ಮೇಲೆ ಆರೋಪ ಮಾಡಿದರೆ ದೊಡ್ಡವರಾಗುತ್ತೇವೆ ಎಂಬ ಭ್ರಮೆ ಇರಬಹುದು ಎಂದು ಮಹಾನಗರ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ವ್ಯಂಗ್ಯವಾಡಿದ್ದಾರೆ.
ಈ ಹಿಂದಿನ ಕಾಂಗ್ರೆಸ್ ಅವಧಿಯಲ್ಲಿ, ನಡೆದ ಭ್ರಷ್ಟಾಚಾರ ಹಾಗು ಕಿಕ್ ಬ್ಯಾಕ್ ಆರೋಪಗಳ ವಿರುಧ್ಧ ಮೊದಲು ಪ್ರತಿಭಟಿಸಲಿ. ಚುನಾವಣೆ ಸಮೀಪಿಸುತ್ತಿರುವ ಈ ದಿನಗಳಲ್ಲಿ, ರಾಜ್ಯ ಸರ್ಕಾರ ಹಾಗು ಪಾಲಿಕೆಯ ಅಭಿವೃಧ್ದಿ ಸಹಿಸದೆ, ಜನರನ್ನ ದಿಕ್ಕು ತಪ್ಪಿಸಲು ವ್ಯವಸ್ಥಿತ ಷಡ್ಯಂತ್ರ ರೂಪಿಸುತ್ತಿದ್ದಾರೆ.
ಲೋಕಾಯುಕ್ತರ ಮೇಲೆ ನಂಬಿಕೆ ಇಲ್ಲದೆ ಅದನ್ನು ರದ್ದುಪಡಿಸಿ ಎಸಿಬಿ ಸ್ಥಾಪನೆ ವಿಚಾರವಾಗಿ ಕೋರ್ಟ್ ಇವರಿಗೆ ಛೀಮಾರಿ ಹಾಕಿದ್ದನ್ನು ಮರೆತಿರುವಂತಿದೆ. ಬಹುಶಃ ಇವರಿಗೆ ಲೋಕಾಯುಕ್ತ ಬಲವರ್ಧನೆ ಇಷ್ಟ ಇರುವ ಆಗಿಲ್ಲ. ಲೋಕಾಯುಕ್ತರ ಮೇಲೆ ನಂಬಿಕೆ ಇಲ್ಲ ಎಂದು ಬಹಿರಂಗವಾಗಿ ಹೇಳಿಬಿಡಲಿ.
ಲೋಕಾಯುಕ್ತರ ತನಿಖೆ ನಡೀತಾ ಇದೆ ಆರೋಪ ಸಾಬೀತಾದರೆ ಎಷ್ಟೇ ದೊಡ್ಡವಾದರೂ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಮಾನ್ಯ ಸಂಸದರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ನಿಮ್ಮ ಬಳಿ ದಾಖಲೆಗಳು ಇದ್ದರೆ, ಸಕ್ಷಮ ಪ್ರಾಧಿಕಾರದ ಬಳಿ ದೂರು ಸಲ್ಲಿಸಿ, ಅದು ಬಿಟ್ಟು ಜನರಿಂದ ತಿರಸ್ಕೃತ ಗೊಂಡಂತವರು, ಮತ್ತೆ ಜನರ ಗಮನ ತಮ್ಮೆಡೆಗೆ ಸೆಳೆಯಲು, ಈ ರೀತಿ ಸಮಾಜದ ದಿಕ್ಕು ತಪ್ಪಿಸುವ ಹುನ್ನಾರ ನಡೆಸಬೇಡಿ. ಅಧಿಕಾರ ಇಲ್ಲದೇ ಹತಾಶರಾಗಿರುವ ಕಾಂಗ್ರೆಸ್ ಪಕ್ಷ ನಿರಂತರ ಸುದ್ದಿಯಲ್ಲಿರುವ ಭ್ರಮೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸುತ್ತಾ, ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಗ್ಯಾಂಗ್ರಿನ್ ಇದ್ದಂತೆ ಜನ ಅದನ್ನು ಈಗಲೇ ಕಿತ್ತು ಎಸೆದಿದ್ದಾರೆ ಇನ್ನೂ ಹೀಗೆ ಮಾಡ್ತಾ ಇದ್ರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಜನರೇ ಕಲಿಸುತ್ತಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರು ಒಪ್ಪಿಕೊಂಡಂತೆ ಬ್ರಹ್ಮಾಂಡ ಭ್ರಷ್ಟಚಾರದಲ್ಲಿ ತೊಡಗಿ ತಮ್ಮ ಮಕ್ಕಳು ಮರಿ ಮಕ್ಕಳು ಕೂತು ತಿನ್ನುವಷ್ಟು ಸಂಪತ್ತು ಮಾಡಿಕೊಂಡಿರುವ ಕಾಂಗ್ರೆಸ್ ಭ್ರಷ್ಟಚಾರದ ಬಗ್ಗೆ ಮಾತನಾಡುವುದು ಎಷ್ಟು ಹಾಸ್ಯಸ್ಪದವಾಗಿದೆ. ಇದೇ ಸಂದರ್ಭದಲ್ಲಿ ಮಾತನಾಡಿದ ಉಪ ಮೇಯರ್ ಗಾಯಿತ್ರಿ ಬಾಯಿ ಖಂಡೊಜಿ ರಾವ್ ರವರು, ಕಾಂಗ್ರೆಸ್ ನವರು ಮಾಡುತ್ತಿರುವ ಆರೋಪಗಳಲ್ಲಿ ಹುರಳಿಲ್ಲಾ, ನಗರ ವ್ಯಾಪ್ತಿ ಅನೇಕ ಅಭಿವೃಧ್ಧಿ ಕಾಮಗಾರಿಗಳು ನಡೆಯುತ್ತಿವೆ, ತಮ್ಮ ವಾರ್ಡುಗಳಲ್ಲಿ ಅಭಿವೃಧ್ದಿ ಕುರಿತು ಕಾಂಗ್ರೆಸ್ ಗಮನ ಹರಿಸುವುದನ್ನ ಬಿಟ್ಟು, ಸುಮ್ಮನೆ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ಪತ್ರಿಕಾ ಗೋಷ್ಟಿಯಲ್ಲಿ ಉಪ ಮೇಯರ್ ಗಾಯಿತ್ರಿ ಬಾಯಿ ಖಂಡೊಜಿ ರಾವ್, ತೆರಿಗೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಾಂತ್ ಕುಮಾರ್ ಸೋಗಿ, ಬಿಜೆಪಿ ಯುವ ಮುಖಂಡರಾದ ಸಂತೋಷ್ ಜಾದವ್ ಇದ್ದರು.