ಸಂವಿಧಾನದ ಆಶಯಗಳ ಪರಿಪಾಲನೆಯ ಆತ್ಮಾವಲೋಕನದ ಅವಶ್ಯಕತೆ ಇದೆ – ಕೆ.ರಾಘವೇಂದ್ರ ನಾಯರಿ
ದಾವಣಗೆರೆ: ಜಗತ್ತಿಗೆ ಮಾದರಿಯಾದ ಸಂವಿಧಾನವನ್ನು ನಮ್ಮ ದೇಶ ಹೊಂದಿದೆ. ಆದರೆ ಪ್ರಜಾಪ್ರಭುತ್ವವಾದಿ ರಾಷ್ಟ್ರವೊಂದರ ಸಂವಿಧಾನದ ಸದಾಶಯಗಳನ್ನು ನಾವು ಎಷ್ಟರ ಮಟ್ಟಿಗೆ ಪರಿಪಾಲಿಸುತ್ತಿದ್ದೇವೆ ಎಂಬ ಆತ್ಮಾವಲೋಕನ ಆಗಬೇಕಾಗಿದೆ. ಸಮಾಜಕ್ಕೆ ದಾರಿದೀಪದಂತೆ ಇರಬೇಕಾದ ಇದು ರಾಜಕಾರಣಿಗಳಿಗೂ, ಅಧಿಕಾರಿಷಾಹಿ ವರ್ಗಕ್ಕೂ ಇದು ಅನ್ವಯಿಸುತ್ತದೆ. ರಾಜಕಾರಣಿಗಳ ಮಿತಿ ಮೀರಿದ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಸ್ವೇಚ್ಛಾವರ್ತನೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣುಕಿಸುವಂತಿದೆ ಎಂದು ಎಐಟಿಯುಸಿ ದಾವಣಗೆರೆ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ವಿಷಾದ ವ್ಯಕ್ತಪಡಿಸಿದರು. ಅವರಿಂದು ದಾವಣಗೆರೆ ನಗರದ ಕಾಮ್ರೇಡ್ ಪಂಪಾಪತಿ ಭವನದಲ್ಲಿ ಎಐಟಿಯುಸಿ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ 74 ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ನಮ್ಮ ಸಂವಿಧಾನವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ರಚನೆಯಾಗಿದೆ. ಆದರೆ ಅದನ್ನು ಜನರಿಗೆ ತಲುಪಿಸುವಲ್ಲಿ ಆಡಳಿತದ ಚುಕ್ಕಾಣಿ ಹಿಡಿದವರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಆಗ ಮಾತ್ರ ಗಣತಂತ್ರದ ನಿಜವಾದ ಆಶಯ ಈಡೇರಲು ಸಾಧ್ಯ ಎಂದು ಕೆ.ರಾಘವೇಂದ್ರ ನಾಯರಿ ಅಭಿಪ್ರಾಯಪಟ್ಟರು.
ರಾಷ್ಟ್ರ ಧ್ವಜವನ್ನು ಅನಾವರಣಗೊಳಿಸಿ ಮಾತನಾಡಿದ ಹಿರಿಯ ಕಾರ್ಮಿಕ ನಾಯಕ ಹಾಗೂ ಎಐಟಿಯುಸಿ ಜಿಲ್ಲಾ ಖಜಾಂಚಿ ಆನಂದರಾಜ್ ಮಾತನಾಡಿ ಗಣರಾಜ್ಯೋತ್ಸವದ ಈ ಐತಿಹಾಸಿಕ ದಿನದಂದು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಸರ್ವರಿಗೂ ಸಮಾನತೆ, ಶಿಕ್ಷಣ, ಆರೋಗ್ಯ ಹಾಗೂ ಇತರೇ ಮೂಲಭೂತ ಹಕ್ಕುಗಳನ್ನು ನೀಡಿರುವ ಸಂವಿಧಾನವನ್ನು ಜಾರಿಗೆ ತರಲು ಶ್ರಮಿಸಿದ ಎಲ್ಲಾ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಎಐಟಿಯುಸಿ ಹರಿಹರ ತಾಲೂಕು ಅಧ್ಯಕ್ಷ ಹೆಚ್.ಕೆ.ಕೊಟ್ರಪ್ಪ ಮಾತನಾಡಿ ಭಾರತ ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ಮೇಲೆಯೇ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವತಂತ್ರ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರೆ ಹಕ್ಕುಗಳು ಸಿಕ್ಕಿರುವುದು. ಬಿಡಿ ಬಿಡಿಯಾಗಿ ಇರದೇ ಒಗ್ಗಟ್ಟಾಗಿ ದೇಶದ ಏಕತೆ ಮತ್ತು ಸಮಗ್ರತೆಯನ್ನು ಸಾಧಿಸಬೇಕೆಂಬುದೇ ಗಣರಾಜ್ಯೋತ್ಸವದ ಆಶಯವಾಗಿದೆ. ಇಂದು ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಅನ್ನುವ ಹೆಗ್ಗಳಿಕೆಗೆ ನಮ್ಮ ಭಾರತ ದೇಶವು ಪಾತ್ರವಾಗಿದೆ. ಅಂತಹ ದೇಶದಲ್ಲಿ ನಾವು ಪ್ರಜೆಗಳಾಗಿದ್ದೇವೆ ಅನ್ನುವುದೇ ನಮ್ಮ ಸೌಭಾಗ್ಯ. ಸಂವಿಧಾನ ನಮಗೆ ನೀಡಿರುವ ಹಕ್ಕುಗಳ ಜೊತೆಗೆ ನಾವು ನಿರ್ವಹಿಸಬೇಕಾದ ಕೆಲ ಕರ್ತವ್ಯಗಳನ್ನೂ ಸಹ ನೀಡಿದೆ. ಅದನ್ನು ಪಾಲಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ನಾವು ಯಾವುದೇ ಜನಾಂಗ, ಧರ್ಮದ ಪ್ರತಿನಿಧಿ ಎಂದು ಭಾವಿಸದೇ ನಾವೆಲ್ಲರೂ ಭಾರತೀಯರು ಎಂದು ಭಾವಿಸಿದಾಗ ಮಾತ್ರ ನಮ್ಮ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಗೌರವ ನೀಡಿದಂತಾಗುತ್ತದೆ ಎಂದು ಹಿರಿಯ ಕಾರ್ಮಿಕ ನಾಯಕ ಹೆಚ್.ಕೆ.ಕೊಟ್ರಪ್ಪ ಅಭಿಪ್ರಾಯಪಟ್ಟರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಉಮೇಶ್ ಅವರಗೆರೆ ಪ್ರಾಸ್ತಾವಿಕವಾಗಿ ಮಾತನಾಡಿ ಗಣರಾಜ್ಯೋತ್ಸವದ ಮಹತ್ವವನ್ನು ವಿವರಿಸಿದರು. ಜಿಲ್ಲಾ ಕಾರ್ಯದರ್ಶಿ ಅವರಗೆರೆ ವಾಸು ಸ್ವಾಗತಿಸಿದರು ಹಾಗೂ ಅಂಗನವಾಡಿ ಫೆಡರೇಶನ್‌ನ ಜಿಲ್ಲಾ ಅಧ್ಯಕ್ಷೆ ಎಂ.ಬಿ.ಶಾರದಮ್ಮ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕದ ಸಂಘದ ಜಿಲ್ಲಾಧ್ಯಕ್ಷ ವಿ.ಲಕ್ಷ್ಮಣ್, ದಾವಣಗೆರೆ ತಾಲೂಕು ಅಧ್ಯಕ್ಷ ನರೇಗಾ ರಂಗನಾಥ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಶೆಟ್ಟರ್, ಚನ್ನಗಿರಿ ತಾಲೂಕು ಅಧ್ಯಕ್ಷ ಜೈನುಲ್ಲಾ ಖಾನ್, ಜಗಳೂರು ತಾಲೂಕು ಅಧ್ಯಕ್ಷ ಮಹಮದ್ ಬಾಷಾ ಹಾಗೂ ಇತರ ಮುಖಂಡರುಗಳಾದ ಮಹಮದ್ ರಫೀಕ್, ಇಪ್ಟಾ ಕಲಾವಿದ ಐರಣಿ ಚಂದ್ರು, ಸಿ.ರಮೇಶ್, ರುದ್ರಮ್ಮ, ಕಾಳಮ್ಮ, ಸುರೇಶ್, ಯರಗುಂಟೆ ಸುರೇಶ್, ಉಮಾಪತಿ ಮತ್ತಿತರರು ಉಪಸ್ಥಿತರಿದ್ದರು.