ಎಸ್ ಎಸ್ ಮಲ್ಲಿಕಾರ್ಜುನ ವಿರುದ್ದ ಬಿಜೆಪಿಯ ಆರೋಪದಲ್ಲಿ  ಹುರುಳಿಲ್ಲ – ಹೆಚ್. ದುಗ್ಗಪ್ಪ

ದಾವಣಗೆರೆ: ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್‌ ಪ್ರಾಣಿ ವಧೆ, ಪ್ರಾಣಿ ಹಿಂಸೆ ಮಾಡುತ್ತಿದ್ದಾರೆಂಬ ಬಿಜೆಪಿ ಪಕ್ಷದವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕೆಪಿಸಿಸಿ ಎಸ್ಸಿ ಘಟಕದ ಕಾರ್ಯಕಾರಣಿ ರಾಜ್ಯ ಸಮಿತಿ ಸದಸ್ಯ ಹೆಚ್. ದುಗ್ಗಪ್ಪ ಹೇಳಿದ್ದಾರೆ.
ಎಸ್ಸ್ ಎಸ್ ಎಂ ವನ್ಯ ಜೀವಿಗಳನ್ನು ಸಾಕಿ ಅವುಗಳಿಗೆ ಹಿಂಸಿಸಿದ್ದಾರೆ, ವಧೆ ಮಾಡಿದ್ದಾರೆಂದು ಬಿಜೆಪಿಯವರು ಮಾಡುತ್ತಿರುವ ಆರೋಪ ಶುದ್ಧ ಸುಳ್ಳಿನಿಂದ ಕೂಡಿದೆ. ಎಸ್ಸೆಸ್ಸೆಂ ಪ್ರಾಣಿಪ್ರಿಯರಾಗಿದ್ದು, ಪರವಾನಿಗೆ ಪಡೆದೆ ಜಿಂಕೆ ಸಾಕಿದ್ದಾರೆ ಹೊರತು ಬಿಜೆಪಿಯವರು ಮಾಡಿರುವ ಆರೋಪದಂತೆ ಕಾಡುಹಂದಿ, ನರಿ, ಮುಂಗುಸಿಯಂತಹ ಪ್ರಾಣಿಗಳನ್ನು ಸಾಕಿಲ್ಲ ಎಂದು ಅವರು ತಿಳಿಸಿದ್ದಾರೆ.
ಎಸ್ಸೆಸ್ಸೆಂಗೆ ಸೇರಿರುವ ನೂರಾರು ಎಕರೆ ಜಮೀನಿನಲ್ಲಿ ಸಣ್ಣಪುಟ್ಟ ಪ್ರಾಣಿಗಳು ಅಹಾರ ಹುಡುಕಿಕೊಂಡು ಬರುತ್ತವೆ, ರೈಸ್‌ಮಿಲ್ ಸಿಬ್ಬಂದಿಗಳು ಹೊಲ ಗದ್ದೆಗಳಲ್ಲಿ ಸಿಕ್ಕಿರುವ ಪ್ರಾಣಿಗಳನ್ನು ಪ್ರೀತಿಯಿಂದ, ಮಾನವೀಯತೆಯಿಂದ ಸಾಕುತ್ತಿದ್ದಾರೆಯೇ ವಿನಃ ಅಲ್ಲಿ ಯಾವ ಅಕ್ರಮ ಸಾಗಾಣಿಕೆ ಅಥವಾ ಪ್ರಾಣಿ ವಧೆ, ಹಿಂಸೆ ನಡೆದಿಲ್ಲ ಎಂದಿದ್ದಾರೆ.
ರೈಸ್‌ಮಿಲ್‌ನಲ್ಲಿ ಪ್ರಾಣಿಗಳಿರುವ ವಿಷಯ ಸಚಿವರ ಗಮನಕ್ಕೆ ಬಂದಿರಲು ಸಾಧ್ಯವಿಲ್ಲ, ಏಕೆಂದರೆ ಮಾಜಿ ಸಚಿವರು ತಮ್ಮ ವ್ಯಾಪಾರ, ವ್ಯವಹಾರ, ರೈಸ್‌ಮಿಲ್‌ಗಳು, ಸಕ್ಕರೆ ಕಾರ್ಖಾನೆಗಳು, ವಿದ್ಯಾಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು, ಎಸ್.ಎಸ್. ಹೈಟೆಕ್ ಆಸ್ಪತ್ರೆಗಳ ವ್ಯವಹಾರಗಳಲ್ಲದೇ ಇದರ ಜೊತೆಗೆ ರಾಜಕೀಯವಾಗಿ ವಿಧಾನಸಭಾ ಚುನಾವಣೆ ಹತ್ತಿರವಿರುವುದರಿಂದ ಪಕ್ಷದ ಗೆಲುವಿಗಾಗಿ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸಗಳಲ್ಲಿ ತೊಡಗಿಕೊಂಡಿರುವುದರಿಂದ ಕೆಲಸದ ಒತ್ತಡದಲ್ಲಿ ಈ ಪ್ರಾಣಿಗಳ ವಿಚಾರ ಅವರಿಗೆ ತಿಳದಿರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯವರು ಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಸಣ್ಣಪುಟ್ಟ ಸುದ್ದಿಗಳನ್ನು, ಸುಳ್ಳು ಸುದ್ದಿಗಳನ್ನು ದೊಡ್ಡದು ಮಾಡುತ್ತಾ ವಿಷಯಗಳನ್ನು ವಿಶ್ಲೇಷಣೆ ಮಾಡದೇ ತಪ್ಪು ಸರಿ ತಿಳಿದುಕೊಳ್ಳದೇ ಸಣ್ಣ ವಿಷಯಕ್ಕೆ ರೆಕ್ಕೆಪುಕ್ಕ ಕಟ್ಟಿ ಕಾಂಗ್ರೆಸ್ ಪಕ್ಷದವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತುದ್ದು, ಮತದಾರರು ಈ ಚುನಾವಣಾ ಸಮಯದಲ್ಲಿ ಸುಳ್ಳು ಸುದ್ದಿಗಳಿಗೆ, ಪೊಳ್ಳು ಆರೋಪಗಳಿಗೆ ಕಿವಿಗೊಡದೆ ಮಲ್ಲಿಕಾರ್ಜುನ ಅವರ ಅಭಿವೃದ್ಧಿ ಕೆಲಸಗಳಿಗೆ ಬೆಲೆಕೊಟ್ಟು ಅವರನ್ನು ಚುನಾವಣೆಯಲ್ಲಿ ಬೆಂಬಲಿಸಿ ಗೆಲ್ಲಿಸಬೇಕೆಂದು ದುಗ್ಗಪ್ಪ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!