ಈಜಾಡಲು ಹೋಗಿ ಶವವಾಗಿ ಬಂದ ಇಬ್ಬರು ಸಹೋದರರು
ಜಗಳೂರು : ಕೆರೆಯಲ್ಲಿ ಈಜಾಡಲು ತೆರಳಿದ್ದ ಇಬ್ಬರು ಕುರಿಗಾಹಿಗಳು ಮಂಗಳವಾರ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲ್ಲೂಕಿನ ಚಿಕ್ಕಮಲ್ಲನಹೊಳೆಯಲ್ಲಿ ನಡೆದಿದೆ.
ಚಿಕ್ಕಮಲ್ಲನಹೊಳೆ ಗ್ರಾಮದ ವಿಜಯ್ (21) ಹಾಗೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಆಲೂರು ಗ್ರಾಮದ ರಾಜು (19) ಸಾವನ್ನಪ್ಪಿದ ಕುರಿಗಾಹಿಗಳು.
ನೀರಿನಲ್ಲಿ ಮುಳುಗಿದ್ದ ಇಬ್ಬರು ಯುವಕರ ಮೃತದೇಹಗಳನ್ನು ಗ್ರಾಮಸ್ಥರ ಸಹಾಯದಿಂದ ಸಂಜೆಯ ವೇಳೆಗೆ ಹೊರಕ್ಕೆ ತೆಗೆಯಲಾಯಿತು. ಪಿಯು ಪರೀಕ್ಷೆ ಬರೆದು ಬಂದಿದ್ದ ರಾಜು ಸಹೋದರ ವಿಜಯ್ ಜೊತೆಗೆ ಕುರಿಗಳನ್ನು ಕಾಯಲು ತೆರಳಿದ್ದನು. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಆಸುಪಾಸಿನ ಗ್ರಾಮಗಳ ಜನರು ಸಾಕಷ್ಟು ಸಂಖ್ಯೆಯಲ್ಲಿ ಕೆರೆ ದಡದಲ್ಲಿ ನೆರೆದಿದ್ದರು. ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಪಿಎಸ್ಐ ಸಾಗರ್ ಭೇಟಿ ನೀಡಿದರು. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಹೋದರಿಯರ ಮಕ್ಕಳಾದ ವಿಜಯ್ ಹಾಗೂ ರಾಜು ಬೇಸಿಗೆ ರಜೆಯ ಕಾರಣ ಕುರಿಗಳನ್ನು ಮೇಯಿಸಲು ತೆರಳಿದ್ದರು. ಕೆರೆಯಲ್ಲಿ ಕುರಿಗಳಿಗೆ ನಿರು ಕುಡಿಸಿದ ನಂತರ ತೀವ್ರ ಬಿಸಿಲಿದ್ದ ಕಾರಣ ಯುವಕ ರಾಜು ಕೆರೆಯಂಚಿನಲ್ಲಿ ಈಜಾಡಲು ನೀರಿಗೆ ಇಳಿದಿದ್ದಾನೆ.
ಈಜು ಬಾರದ ರಾಜು ಆಳವಾದ ಗುಂಡಿಯಲ್ಲಿ ಮುಳಗುತ್ತಿದ್ದಂತೆ ವಿಜಯ್ ಸಹೋದರನನ್ನು ರಕ್ಷಿಸಲು ಮುಂದಾದಾಗ ಇಬ್ಬರೂ ಗುಂಡಿಯಲ್ಲಿ ಮುಳುಗಿದ್ದಾರೆ. ಸ್ಥಳದಲ್ಲಿದ್ದ ಕೆಲವರು ಮುಳುಗುತ್ತಿದ್ದ ಯುವಕರನ್ನು ರಕ್ಷಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.