ಪುತ್ರಿಯರಿಂದ ತಂದೆಯ ಶವಕ್ಕೆ ಆಗ್ನಿ ಸ್ಪರ್ಶ : ಕೊವಿಡ್ ನಿಂದ ಸಾವನ್ನಪ್ಪಿದ್ದ ತಂದೆಗೆ ಪುತ್ರಿಯರ ನಮನ

ದಾವಣಗೆರೆ: ಇತ್ತೀಚೆಗಷ್ಟೆ ಬೆಂಗಳೂರಿನ ಯುವಕನೋರ್ವ ತನ್ನ ತಂದೆ ಕೋವಿಡ್ ನಿಂದ ಸಾವನ್ನಪ್ಪಿದ ಸಂದರ್ಭದಲ್ಲಿ ಅಂಬ್ಯುಲೆನ್ಸ್ ಚಾಲಕನಿಗೆ ಹಣಕೊಟ್ಟು ಅಂತ್ಯಕ್ರಿಯೆ ಮಾಡಲು ಹೇಳಿ ಆ ಜಾಗದಿಂದ ಹಿಂದಿರುಗಿದ್ದ ಘಟನೆ ಇನ್ನೂ ಜನಮಾನಸದಲ್ಲಿ ಉಳಿದಿರುವಾಗಲೆ, ಇದಕ್ಕೆ ತದ್ವಿರುದ್ಧವಾಗಿ ಇಬ್ಬರು ಹೆಣ್ಣುಮಕ್ಕಳು ಕೋವಿಡ್ ನಿಂದ ಮೃತರಾದ ತನ್ನ ತಂದೆಯ ಅಂತ್ಯಕ್ರಿಯೆಯನ್ನು ತಾವೇ ಮುಂದೆ ನಿಂತು ಮಾಡಿ ಜವಾಬ್ದಾರಿ ಮೆರೆದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹೌದು, ನಿನ್ನೆಯಷ್ಟೆ ದಾವಣಗೆರೆಯ ಗಾಂಧಿ ವೃತ್ತದಲ್ಲಿರುವ ಶಾಸ್ತ್ರೀ ಬೇಕರಿ ಮಾಲೀಕರಾದ ಶ್ರೀಕಂಠರವರು ಕೋವಿಡ್ ನಿಂದ ಬಾಪೂಜಿ ಆಸ್ಪತ್ರೆಯಲ್ಲಿ ಅಸುನೀಗಿದ್ದು, ಅವರಿಗಿರುವ ಇಬ್ಬರೂ ಹೆಣ್ಣು ಮಕ್ಕಳು, 12 ದಿವಸ ಕೋವಿಡ್ ಸೆಂಟರ್ ನಲ್ಲಿ ತಂದೆಯ ಆರೈಕೆ ಮಾಡಿ, ನಿಧನದ ನಂತರ ಪೋಸ್ಟ್ ಮಾಟಂ ರೂಂ ನಲ್ಲಿದ್ದ ದೇಹವನ್ನು ಅವರೇ ಒಳಗಡೆ ಕಳಿಸಿದ್ದಾರೆ, ಅಂಬ್ಯುಲೈನ್ಸ ತರಿಸಿ, ಅವರ ಮನೆಯ ಹತ್ತಿರ ತೆಗೆದುಕೊಂಡು ಹೋಗಿ ಅವರ ತಾಯಿ ಅಜ್ಜಿ ಕಡೆಯಿಂದ ಪೂಜೆ ಮಾಡಿಸಿ, ನಂತರ ತಂದೆಯ ಶವಕ್ಕೆ ಆಗ್ನಿ ಸ್ಪರ್ಶ ಮಾಡಿ ಅಂತ್ಯಕ್ರಿಯೆ ಮುಗಿಸಿದ್ದಾರೆ.
ಕರೋನಾ ರೋಗಿಗಳನ್ನು ಮಾತನಾಡಿಸುವುದಿರಲಿ, ನೋಡಿದರೆ ಸಾಕು ಮೈಲು ದೂರ ಓಡಿ ಹೋಗುವವರ ಮಧ್ಯೆ ಈ ಇಬ್ಬರು ಹೆಣ್ಣುಮಕ್ಕಳು 17,18 ವರ್ಷದ ಹುಡುಗಿಯರು ಧೈರ್ಯವಾಗಿ ಯಾವುದೇ ಆಳುಕಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಅವರ ಬಗ್ಗೆ ಹೆಮ್ಮೆಯ ಮಾತುಗಳು ಕೇಳಿಬಂದಿವೆ.
ಕುಡುಂಬ ವರ್ಗದವರಲ್ಲಿ, ಬಂಧು-ಬಳಗದಲ್ಲಿ ಯಾರಿಗಾದರೂ ಕೋವೀಡ್ ಆದರೆ ಅವರನ್ನೂ ನೋಡುವುದಕ್ಕು, ಮಾತಾನಾಡುವುದಕ್ಕೂ ಭಯಪಡುವ ಜನರ ಮಧ್ಯೆ, ಈ ಹೆಣ್ಣುಮಕ್ಕಳು ಮಾದರಿಯಾಗಿ ನಿಂತಿದ್ದಾರೆ. ಕೋವಿಡ್ ನಿಂದ ಸತ್ತವರಿಗಿಂತ, ಹೆದರಿ ಸತ್ತವರೇ ಹೆಚ್ಚು.
ಎಲ್ಲಾ ರೋಗಕ್ಕೂ ಧೈರ್ಯವೇ ತಂತ್ರ, ಮಂತ್ರ. ಆದ್ದರಿಂದ, ಈ ಕೋವಿಡ್ ಪೆಡಂಭೂತವನ್ನೂ ಧೈರ್ಯವಾಗಿ ಎದುರಿಸಬೇಕಿದೆ. ಈ ಕಾಯಿಲೆ ನಿಮ್ಮ ಬಂಧುಗಳು, ಗೆಳೆಯರು,ಅಕ್ಕ ಪಕ್ಷದವರ ಮನೆಯಲ್ಲಿ ಕಾಣಿಸಿಕೊಂಡರೆ, ನಿಮಗೆ ವಿಷಯ ತಿಳಿದರೆ ಮೊಬೈಲ್ ಮುಖಾಂತರ ಅವರಿಗೆ ಅವರ ಮನೆಯವರಿಗೆ ಧೈರ್ಯ ತುಂಬಬೇಕಿದೆ. ಗೊತ್ತಿರುವ ಬಗ್ಗೆ ವೈದ್ಯ ಉಪಚಾರದ ಬಗ್ಗೆ ಮಾಹಿತಿ ನೀಡಿ, ಊಟೋಪಚಾರದ ಸಹಾಯ ಮಾಡಿ, ಧೈರ್ಯ ತುಂಬುವ ಜತೆಗೆ ಕರೋನಾ ರೋಗಿಗಳಲ್ಲೂ ಆತ್ಮವಿಶ್ವಾಸ ತುಂಬೋಣ.