ಚರಂಡಿ ಸ್ವಚ್ಛತೆ ವೇಳೆ ದಾವಣಗೆರೆ ಜಿಲ್ಲೆಯಲ್ಲಿ ಇಬ್ಬರು ಕಾರ್ಮಿಕರ ಸಾವು: ನ್ಯಾಯಕ್ಕಾಗಿ ಪ್ರತಿಭಟನೆ
ದಾವಣಗೆರೆ: ಚರಂಡಿ ಸ್ವಚ್ಛಗೊಳಿಸುವಾಗ ಇಬ್ಬರು ಕಾರ್ಮಿಕರು ಮೃತಪಟ್ಟ ಟನೆ ಜಗಳೂರು ತಾಲ್ಲೂಕು ಬಸವನಕೋಟೆ ಗ್ರಾಮದಲ್ಲಿ ನಡೆದಿದೆ.
ಚಂರಂಡಿ ಸ್ವಚ್ಛತೆಗೆ ಯಾವುದೇ ಸುರಕ್ಷಿತ ಕಿಟ್ ಗಳಿಲ್ಲದೆ ಇಳಿಸಿದ್ದಾರೆ. ಇದರಿಂದ ವಿಷಪೂರಿತ ವಸ್ತು, ಕಲುಷಿತ ನೀರಿನ ದುರ್ವಾಸನೆ ಸೇವನೆಯಿಂದ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಅರಸೀಕೆರೆ ಸಾರ್ವಜನಿಕ ಆಸ್ಪತ್ರೆಯಿಂದ ದಾವಣಗೆರೆ ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.
ಮೃತರ ಶವವನ್ನು ಗ್ರಾಮ ಪಂಚಾಯ್ತಿ ಕಚೇರಿ ಮುಂದಿಟ್ಟು ಕುಟುಂಬ ಹಾಗೂ ದಲಿತ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿ, ಮೃತಪಟ್ಟ ಕುಟುಂಬಕ್ಕೆ ಪರಿಹಾರ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಗ್ರಾಮದ ಸತ್ಯಪ್ಪ ಹಾಗೂ ಮೈಲಪ್ಪ ಎಂಬುವವರೇ ಮೃತಪಟ್ಟ ದುರ್ದೈವಿಗಳಾಗಿದ್ದು, ಯುಗಾದಿ ಹಬ್ಬದ ಸಂಭ್ರಮದಲ್ಲಿರಬೇಕಾದ ಗ್ರಾಮದಲ್ಲಿ ಇದೀಗ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ತಾಲ್ಲೂಕು ಪಂಚಾಯ್ತಿ ಇಒ ಚಂದ್ರಶೇಖರ್ ಹಾಗೂ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮಹೇಶ್ವಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್ ತಂತ್ರಸ್ಥರು ಹಾಗೂ ದಲಿತ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.
ಸಂತ್ರಸ್ತ ಕುಟುಂಬಕ್ಕೆ ತಲಾ ಆರು ಲಕ್ಷ ರೂ. ಪರಿಹಾರ ಧನ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ನೀಡುವ ಭರವಸೆಯನ್ನು ಅಧಿಕಾರಿಗಳು ನೀಡಿದ ಹಿನ್ನೆಲೆಯಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಯಿತು.