ಕಾಳಸಂತೆಯಲ್ಲಿ ರೆಮ್‌ಡಿಸಿವರ್ ಮಾರಾಟ,ಸರ್ಕಾರಿ ಆಸ್ಪತ್ರೆಯ ಫಾರ್ಮಾಸಿಸ್ಟ್ ಸೇರಿ ಇಬ್ಬರ ಬಂಧನ
ದಾವಣಗೆರೆ: ಕೊರೊನಾ ಸೋಂಕಿತರಿಗೆ ನೀಡುವ ರಮ್‌ಡಿಸಿವರ್ ಚುಚ್ಚುಮದ್ದನ್ನ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಇಬ್ಬರು ಸಿಬ್ಬಂದಿಯನ್ನು ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುವ ಗಣೇಶ್ (38), ಫಾರ್ಮಸಿಸ್ಟ್ ಮಂಜುನಾಥ ರಾವ್ ಜಿ. (58) ಬಂಧಿತ ಆರೋಪಿಗಳು. ಅವರಿಂದ 9 ರಮ್‌ಡಸಿವರ್ ಇಂಜೆಕ್ಷನ್, ಒಂದು ಅಟೊ ಹಾಗೂ 10 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.
ಗಣೇಶಪ್ಪ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಜತೆಗೆ ಆಟೊ ಕೂಡ ಓಡಿಸುತ್ತಾನೆ. ಬಾಪೂಜಿ ಆಸ್ಪತ್ರೆ ಸಮೀಪದ ನಿಲ್ದಾಣದ ಬಳಿ ಆಟೋ ಮೂಲಕ ರೆಮಿಡಿಸವರ್ ಇಂಜೆಕ್ಷನ್ ಮಾರುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಬಡಾವಣೆ ಠಾಣೆ ಪಿಎಸ್‌ಐ ಅರವಿಂದ ಮತ್ತು ಡ್ರಗ್ಸ್ ಇನ್‌ಸ್ಪೆಕ್ಟರ್ ಗೀತಾ ಜತೆಯಾಗಿ ಕಾರ್ಯಾಚರಣೆ ನಡೆಸಿದರು.
ಸರ್ಕಾರಿ ಆಸ್ಪತ್ರೆಯ ಫಾರ್ಮಾಸಿಸ್ಟ್ ಮಂಜುನಾಥ ರಾವ್ ರನ್ನ ಸೇವೆಯಿಂದ ಅಮಾನತು ಮಾಡಲಾಗಿದೆ. ಸ್ವಚ್ಛತಾ ಸಿಬ್ಬಂದಿ ಗಣೇಶ್ ಗುತ್ತಿಗೆ ರದ್ದತಿಗೆ ಏಜೆನ್ಸಿಗೆ ತಿಳಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.