ಉನ್ನತ ಶಿಕ್ಷಣ ಇಲಾಖೆ ಸ್ಪಂದಿಸಿ: ಅಂತಿಮ ವರ್ಷದ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಮನವಿ – ಎ ಐ ಡಿ ಎಸ್ ಒ ಪ್ರತಿಭಟನೆ

 

ದಾವಣಗೆರೆ: ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾದ ಮೂರು ಸೆಮಿಸ್ಟರ್ ಪರೀಕ್ಷೆಯಲ್ಲಿ ಯಾವುದಾದರೂ ಒಂದು ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಪ್ರತಿಭಟನೆ ನಡೆಸಿತು.

ಜಯದೇವ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಎಸಿ ಮುಖಾಂತರ ಉನ್ನತ ಶಿಕ್ಷಣ ಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ಎಐಡಿಎಸ್ ಓ ನೇತೃತ್ವದಲ್ಲಿ ಇಡೀ ರಾಜ್ಯದಾದ್ಯಂತ ಕಳೆದ ಒಂದು ತಿಂಗಳಿಂದ ಡಿಪ್ಲೊಮಾ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರ ಪ್ರತಿಫಲವಾಗಿ, ವಿದ್ಯಾರ್ಥಿಗಳ ಬೇಡಿಕೆ ಸ್ಪಂದಿಸಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಒಂದೇ ಸೆಮಿಸ್ಟರ್ ಪರೀಕ್ಷೆ ನಡೆಸುವಂತೆ ಆದೇಶ ಹೊರಡಿಸಿರುವುದು ಸ್ವಾಗತಾರ್ಹ.

ಇದರಿಂದಾಗಿ ರಾಜ್ಯದ ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ. ಆದರೆ, ಅಂತಿಮ ವರ್ಷದ ವಿದ್ಯಾರ್ಥಿಗಳ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಇಂತಹ ಅಸಮಾನ್ಯ ಪರಿಸ್ಥಿತಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಮೂರು ಪರೀಕ್ಷೆಗಳನ್ನು ಅಕ್ಟೋಬರ್ ತಿಂಗಳೊಳಗೆ ಎದುರಿಸುವ ಸಮಸ್ಯೆಯಿಂದಾಗಿ, ಆತಂಕಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಕೂಡ ಸೂಕ್ತ ಪರಿಹಾರವನ್ನು ನೀಡಬೇಕು. ಯಾವುದಾದರೂ ಒಂದು ಸೆಮಿಸ್ಟರ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಉನ್ನತ ಶಿಕ್ಷಣ ಇಲಾಖೆ ಸ್ಪಂದಿಸಿದರೆ ರಾಜ್ಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡವು ಸ್ವಲ್ಪಮಟ್ಟಿಗಾದರೂ ಕಡಿಮೆಯಾಗುತ್ತದೆ ಎಂದು‌ ಮನವಿ‌ ಮಾಡಿದರು. ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ಈ ಮೂಲಕ ಮನವಿ ಮಾಡುತ್ತದೆ.

ಪ್ರತಿಭಾನೆಯಲ್ಲಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಪೂಜಾ ಎನ್, ಜಿಲ್ಲಾ ಜಂಟಿ ಕಾರ್ಯದರ್ಶಿ ಕಾವ್ಯ, ಜಿಲ್ಲಾ ಸಮಿತಿ ಸದಸ್ಯೆ ಪುಷ್ಪ ಸೇರಿದಂತೆ ‌ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!