ಕೋಮಾರನಹಳ್ಳಿಯಲ್ಲಿ ಅವೈಜ್ಞಾನಿಕವಾಗಿ ಕೆರೆಯ ಮಣ್ಣು ಎತ್ತುವಳಿ.! ತಹಶೀಲ್ದಾರ್ ರಿಂದ ಡಿಸಿಗೆ ವರದಿ ಸಲ್ಲಿಕೆ
ದಾವಣಗೆರೆ: ಹರಿಹರ ತಾಲ್ಲೂಕು ಮಲೇಬೆನ್ನೂರು ಹೋಬಳಿ ಕೊಮಾರನಹಳ್ಳಿ ಗ್ರಾಮದಲ್ಲಿ ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಅಣ್ಣೇಶ್ ಅವರು ಅವೈಜ್ಞಾನಿಕವಾಗಿ ಕೆರೆಯ ಮಣ್ಣನ್ನು ತೆಗೆಯುತ್ತಿರುವುದು ಕುರಿತು ಬಂದಿದ್ದ ದೂರಿಗೆ ಸಂಬಂಧಿಸಿದಂತೆ ವಾಸ್ತವಾಂಶದ ವರದಿಯನ್ನು ಹರಿಹರ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಸಾರ್ವಜನಿಕರಿಂದ ಮೌಖಿಕವಾಗಿ ಬಂದಿರುವ ದೂರಿನ ಮೇರೆಗೆ ಸ್ಥಳ ಪರಿಶೀಲನೆ ಮಾಡಲಾಗಿ, ಕೆರೆಯಲ್ಲಿ 12 ಹಿಟಾಚಿ, 1 ಜೆಸಿಬಿ, 16 ದೊಡ್ಡ ಲಾರಿಗಳು ಹಾಗೂ ಸುಮಾರು 35 ಟ್ರ್ಯಾಕ್ಟರ್ಗಳ ಮೂಲಕ ಮಣ್ಣು ತೆಗೆಯುತ್ತಿರುವುದು ಸತ್ಯ ಎಂದವರು ತಿಳಿಸಿದ್ದಾರೆ.
ಯಾವ ಷರತ್ತುಗಳನ್ನೂ ಪಾಲನೆ ಮಾಡದೆ ಉಲ್ಲಂಘನೆ ಮಾಡಿ, ಅವೈಜ್ಞಾನಿಕವಾಗಿ ಮಣ್ಣು ತೆಗೆಯಲಾಗುತ್ತಿದೆ. ಕೆಲವು ಕಡೆ 15-20 ಅಡಿ ಆಳಕ್ಕೆ ಗುಂಡಿ ಬಿದ್ದಿದೆ. ಇದರಿಂದ ಮುಂದಿನ ದಿನಗಳಲ್ಲಿ ಪ್ರಾಣ ಹಾನಿ ಸಾಧ್ಯತೆಯೂ ಇದೆ.
ಕೆರೆಯ ಹೂಳೆತ್ತಲು ಸಹಾಯಕ ಕಾರ್ಯಪಾಲಕ ಅಭಿಯಂತರರು ಪಂ.ರಾ ಇಂ. ಉಪ ವಿಭಾಗ ಹರಿಹರ ಇವರು ನಿರಾಕ್ಷೇಪಣಾ ಪತ್ರ ನೀಡಿದ್ದು, ಆದರೆ ಪತ್ರದಲ್ಲಿ ವಿಧಿಸಲಾದ ಷರತ್ತುಗಳ್ನು ಪಾಲನೆ ಮಾಡುತ್ತಿದ್ದಾರೋ ಇಲ್ಲವೋ ಎಂಬ ಬಗ್ಗೆ ಪರಿಶೀಲನೆ ಮಾಡದೇ ಇರುವುದರಿಂದ ಮಣ್ಣನ್ನು ಎಗ್ಗಿಲ್ಲದೆ ಎತ್ತುವಳಿ ಮಾಡಿ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.