UPSC: ದಾವಣಗೆರೆಯ ಅವಿನಾಶ್, ಕೇಂದ್ರ ನಾಗರಿಕ ಸೇವಾ ಆಯೋಗದ UPSC ಪರೀಕ್ಷೆಯಲ್ಲಿ 31 ನೇ ಸ್ಥಾನ.!

 

ದಾವಣಗೆರೆ: ದಾವಣಗೆರೆ ನಗರದ ಪ್ರತಿಷ್ಟಿತ ಹೋಟೆಲ್ ಉದ್ಯಮಿ ವಿಠಲ ರಾವ್ ಅವರ ಪುತ್ರ ಅವಿನಾಶ ವಿ. ರಾವ್ ಮೊದಲ ಪ್ರಯತ್ನದಲ್ಲೇ ಕೇಂದ್ರ ನಾಗರಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ 31 ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ, ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ ದಾವಣಗೆರೆಯ ಲಾಯರ್ ರಸ್ತೆಯಲ್ಲಿರುವ ಅವಿನಾಶ್ ಅವರ ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿತ್ತು.

ಅವಿನಾಶ್ ಯು ಪಿ ಎಸ್ ಸಿ ಯಲ್ಲಿ ಅತ್ಯುತ್ತಮ ಸ್ಥಾನ ಗಳಿಸಿದ್ದಕ್ಕೆ ಕುಟುಂಬದ ಗೌರವ ಹೆಚ್ಚಾಗಿದೆ. ಈ ಮೂಲಕ ನಮ್ಮ ಮಗ ದಾವಣಗೆರೆ ಹಾಗೂ ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ ಎಂದು ಕೊಂಡಾಡಿದ್ದಾರೆ.

ಅವಿನಾಶ್‌ರ ತಾತ ಆನಂದ ರಾವ್, ಮೂಲತಃ ಉಡುಪಿ ಜಿಲ್ಲೆಯವರು ಸುನಾರು 8 ದಶಕಗಳ ಹಿಂದೆ ದಾವಣಗೆರೆಗೆ ಬಂದ ಅವರು ಇಲ್ಲಿ ಜನತಾ ಹೋಟೆಲ್ ಆರಂಭಿಸಿದ್ದರು. ಪ್ರಸ್ತುತ ಅವರ ಮಾಲೀಕತ್ವದಲ್ಲಿ ನಗರದಲ್ಲೇ ಮೂರು ಹೋಟೆಲ್‌ಗಳಿವೆ. ದಾವಣಗೆರೆಯಲ್ಲೇ ಹುಟ್ಟಿ ಬೆಳೆದ ಅವಿನಾಶ ರಾವ್, ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಬಾಪೂಜಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ತೋಳಹುಣಸೆಯ ಪಿಎಸ್ಎಸ್‌ಆರ್‌ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದಾರೆ. ನಗರದ ಧವನ ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿದ್ಯಾಲಯದಲ್ಲಿ 5 ವರ್ಷಗಳ ಕಾನೂನು ಪದವಿ ಪಡೆದಿದ್ದಾರೆ.

ಮೊದಲ ಪ್ರಯತ್ನದಲ್ಲೇ ಯಶಸ್ಸು ಎಸ್‌ಎಸ್‌ಎಲ್‌ಸಿ, ಪಿಯುಸಿ ಯಲ್ಲಿ ಅಗ್ರ ಶ್ರೇಯಾಂಕದಲ್ಲಿ ಉತ್ತೀಣರಾಗಿರುವ ಅವಿನಾಶ್, ಕಾನೂನು ಪದವಿಯಲ್ಲಿ ಬಂಗಾರದ ಪದಕ ಗಳಿಸಿದ್ದಾರೆ. ಆರಂಭದಿಂದಲೂ ಹೋಟೆಲ್ ವ್ಯವಹಾರದ ಬಗ್ಗೆ ತಲೆ ಕೆಡಿಸಿಕೊಳ್ಳದ ಅವಿನಾಶ್, ಓದಿನ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದರು. ಪ್ರಸ್ತುತ ಕಠಿಣ ಪರಿಶ್ರಮದಿಂದ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿ ಭಾರತೀಯ ವಿದೇಶ ಸೇವೆ (ಐಎಫ್‌ಎಸ್) ಆಯ್ಕೆ ಮಾಡಿಕೊಂಡಿದ್ದಾರೆ.

ಪುತ್ರನ ಸಾಧನೆ ಕುರಿತು ಪ್ರತಿಕ್ರಿಯಿಸಿದ ವಿಠಲ ರಾವ್, ವಿದೇಶಾಂಗ ವಿಭಾಗ ಆಯ್ಕೆ ಮಾಡಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಸೇವೆ ಸಲ್ಲಿಸಬೇಕು ಎಂಬುದು ಅವಿನಾಶ್ ಆಸೆ. ಈ ಯಶಸ್ಸಿನ ಹಿಂದೆ ಹಲವು ವರ್ಷಗಳ ಕಠಿಣ ಪರಿಶ್ರಮವಿದೆ. ಜತೆಗೆ ಆತನ ಕನಸುಗಳಿಗೆ ಇಡೀ ಕುಟುಂಬ ಬೆನ್ನೆಲುಬಾಗಿ ನಿಂತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಅಜ್ಜ ಆನಂದ ರಾವ್, ತಾಯಿ ಸ್ಮಿತಾ ರಾವ್, ದೊಡ್ಡಪ್ಪ ನಾಗರಾಜ ರಾವ್, ಸಹೋದರಿ ಡಾ. ಅಪರ್ಣಾ ಇದ್ದರು.

ವಿಠಲ ರಾವ್ ಅವರಿಗೆ ಅವಿನಾಶ್ ಹಾಗೂ ಡಾ. ಅರ್ಪಿತಾ ಅವಳಿ ಮಕ್ಕಳು. ಅವಿನಾಶ್ ಯುಪಿಎಸ್‌ಸಿ ಯಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ್ದು, ಪುತ್ರಿ ಅರ್ಪಿತಾ ಎಂಬಿಬಿಎಸ್ ಮುಗಿಸಿ ಇದೀಗ ಎಂಡಿ ವಿದ್ಯಾಭ್ಯಾಸಕ್ಕೆ ತಯಾರಿ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ಇಂದು ಬಿಡುಗಡೆಯಾದ ಪಟ್ಟಿಯಲ್ಲಿ ದಾವಣಗೆರೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವುದಂತು ಸತ್ಯ ಎನ್ನಬಹುದು.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!