Urea Fertilizer :ರಸಗೊಬ್ಬರದ ಕೊರತೆ ರಾಜ್ಯದಲ್ಲಿಇಲ್ಲ, ರೈತರು ಭಯಪಡುವ ಅಗತ್ಯವಿಲ್ಲ : ಎನ್. ಚಲುವರಾಯಸ್ವಾಮಿ

Urea Fertilizer: There is no shortage of fertilizer in the state, farmers need not fear: N. Chaluvarayaswamy ರಸಗೊಬ್ಬರ

ಬೆಂಗಳೂರು:Urea Fertilizer ರಾಜ್ಯದಲ್ಲಿ ಯಾವುದೇ ಜಿಲ್ಲೆಯಲ್ಲಿ ರಸಗೊಬ್ಬರ ಪೂರೈಕೆಯ ಕೊರತೆ ಇಲ್ಲ. ರೈತರು ಆತಂಕಕ್ಕೆ ಈಡಾಗಬಾರದು, ಅಲ್ಲದೆ ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ಹೆಚ್ಚುವರಿ ಉಳಿಕೆ ಇರುವ ಇತರೆಡೆಗಳಿಂದ ವರ್ಗಾವಣೆ ಮಾಡಿ ಸರಿದೂಗಿಸಲಾಗುವುದು ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ರವರು ತಿಳಿಸಿದ್ದಾರೆ.

ವಿಕಾಸ ಸೌಧದ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ಧಿಗಾರರಿಗೆ ಈ ವಿಷಯ ಸ್ಪಷ್ಟಪಡಿಸಿದ ಸಚಿವರು ರೈತರಿಗೆ ಯಾವುದೇ ರೀತಿ ತೊಂದರೆಗಳಾಗದಂತೆ ನಿಗಾ ವಹಿಸಲು ಇಲಾಖೆಯ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ವರ್ಷ ಮುಂಗಾರು ಬೇಗ ಆರಂಭವಾದ ಕಾರಣ ಹಾಗೂ ಸುಮಾರು 2 ಲಕ್ಷ ಹೆಕ್ಟೇರ್ ಮುಸಿಕನ ಜೋಳ ಪ್ರದೇಶ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಕೆಲವು ರೈತರು ಆತಂಕದಿಂದ ಆಗಸ್ಟ್ – ಸೆಪ್ಟೆಂಬರ್ ಗೆ ಬೇಕಾದ ಗೊಬ್ಬರವನ್ನ ಈಗಲೇ ಖರೀದಿಸಲು ಮುಂದಾಗಿದ್ದು ಸಹ ತಕ್ಷಣ ಬೇಡಿಕೆ ಹೆಚ್ಚಲು ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ನಮ್ಮ ಗುರಿಗಿಂತ ಹೆಚ್ಚಿನ ದಾಸ್ತಾನು ಲಭ್ಯವಿದೆ, ಜುಲೈ ಮಾಹೆಯ ಬೇಡಿಕೆಯಂತೆ ಆಧಾರದಲ್ಲಿನ ವಿತರಣೆಯ ನಂತರವೂ ದಾಸ್ತಾನು ಉಳಿಕೆ ಇದೆ ಒಂದು ವೇಳೆ ಕೆಲವು ನಿರ್ಧಿಷ್ಟ ಪ್ರದೇಶಗಳಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರದ ಕೊರತೆ ಕಂಡುಬಂದಲ್ಲಿ ಹೆಚ್ಚುವರಿಯಾಗಿ ಉಳಿಕೆಯಾಗಿರುವ ಜಿಲ್ಲೆಗಳಿಂದ ಮರುವಿಂಗಡಣೆ ಮಾಡಿ, ಸರಬರಾಜು ಮಾಡಲಾಗುವುದು, ಕೃಷಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಸಚಿವ ಎನ್. ಚಲುವರಾಯಸ್ವಾಮಿ ಮನವಿ ಮಾಡಿದರು.

ಜುಲೈ ಮಾಹೆಯ ವರೆಗೆ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 5,34,009 ಮೆ.ಟನ್. ರಸಗೊಬ್ಬರ (ಎಲ್ಲಾ ವಿಧದ ರಸಗೊಬ್ಬರ ಸೇರಿ) ಹಂಚಿಕೆಯಾಗಿದೆ. ಇದರಲ್ಲಿ ಈವರೆಗೆ 4,30,633 ಮೆ.ಟನ್. ಸರಬರಾಜಾಗಿದೆ.
ಏಪ್ರಿಲ್ ನಿಂದ ಜುಲೈವರೆಗೆ ರಾಜ್ಯದಲ್ಲಿ 6,80,655 ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ ಇದ್ದು, ಕೇಂದ್ರ ಸರ್ಕಾರದಿಂದ 6,82,500 ಮೆ. ಟನ್ ಹಂಚಿಕೆಯಾಗಿದೆ. ಇದರಲ್ಲಿ 5,26,817 ಮೆಟ್ರಿಕ್ ಟನ್ ಸರಬರಾಜಾಗಿದೆ.

ರಾಜ್ಯದಲ್ಲಿ 3,46,499 ಹಳೆ ಯೂರಿಯಾ ದಾಸ್ತಾನು ಉಳಿಕೆ ಇದ್ದು, ಕೇಂದ್ರದಿಂದ ಸರಬರಾಜಾದ ಯೂರಿಯಾ ಸೇರಿದಂತೆ 8,73,315 ಮೆಟ್ರಿಕ್ ಟನ್ ಒಟ್ಟು ಲಭ್ಯತೆ ಇತ್ತು, ಇದರಲ್ಲಿ 7,08,859 ಮೆಟ್ರಿಕ್ ಟನ್ ಯೂರಿಯಾವನ್ನು ವಿವಿಧ ಜಿಲ್ಲೆಗಳಿಗೆ ವಿತರಿಸಿದ್ದು, ರೈತರಿಗೂ ಮಾರಾಟ ಮಾಡಲಾಗಿದೆ. ಇನ್ನು 1,64,56 ಮೆಟ್ರಕ್ ಟನ್ ಯೂರಿಯ ದಾಸ್ತಾನು ಉಳಿಕೆಯಿದೆ. ಅಲ್ಲದೆ ಕೇಂದ್ರದಿಂದ ಹಂತ ಹಂತವಾಗಿ ಪೂರೈಕೆಯಾಗುವ ರಸಗೊಬ್ಬರವನ್ನು ಆಗಿಂದಾಗಲೇ ಹಂಚಿಕೆ ಮಾಡಿ ವರ್ಗಾವಣೆ ಮಾಡಲಾಗುವುದು.

ರಾಜ್ಯ ಸರ್ಕಾರ ನಿರಂತರವಾಗಿ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ಸಹ ಯೂರಿಯ ಶೀಘ್ರ ಪೂರೈಕೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಯಾವುದೇ ಸಮಸ್ಯೆಗಳಿಲ್ಲದಂತೆ ರಸಗೊಬ್ಬರ ಪೂರೈಕೆ ನಿವಾರಿಸಲು ಅಧಿಕಾರಿಗಳ ತಂಡಕ್ಕೆ ಸೂಚಿಸಲಾಗಿದೆ ಎಂದು ಎನ್. ಚಲುವರಾಯಸ್ವಾಮಿ ರವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ನ್ಯಾನೋ ಯೂರಿಯಾ ಕೂಡ ಲಭ್ಯವಿದ್ದು ಇದು ಸಹ ಹೆಚ್ಚು ಪರಿಣಾಮಕಾರಿ ಮತ್ತು ಲಾಭದಾಯಕ ಎಂಬುದು ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು, ರೈತರು ನಡೆಸಿದ ಪ್ರಯೋಗಗಳ ಸಾಭೀತಾಗಿದ್ದು. ಉಳಿತಾಯ ಕೂಡ ಆಗಲಿದೆ. ಆದ್ದರಿಂದ ಕೃಷಿಕರು ಈ ಬಗ್ಗೆಯೂ ಗಮನಹರಿಸಬೇಕೆಂದು ಸಚಿವರು ಹೇಳಿದರು.

ಅತಿಯಾದ ರಸಗಬ್ಬರ ಬಳಕೆ ಭೂಮಿಯ ಫಲವತ್ತತೆ ಹಾಗೂ ಮಾನವನ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದ್ದು, ಮುಂದಿನ ಭವಿಷ್ಯದ ದೃಷ್ಟಿಯಿಂದ ರಸಗೊಬ್ಬರಗಳ ಬಳಕೆ ಹಸಿರು ಗೊಬ್ಬರ, ಜೈವಿಕ ಗೊಬ್ಬರಗಳ ಬಳಕೆ ಹೆಚ್ಚಿಸುವುದು ಅಗತ್ಯವಿದೆ. ಈ ಬಗ್ಗೆಯೂ ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಎನ್. ಚಲುವರಾಯಸ್ವಾಮಿ ಮಾಹಿತಿ ನೀಡಿದರು.

 

 

 

error: Content is protected !!