ಕರ್ನಾಟಕ ರಾಜ್ಯದಲ್ಲಿ ಲಾಟರಿ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯ
ಬೆಂಗಳೂರು: ಪ್ರಸಕ್ತ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯ ಲಾಟರಿ ಯೋಜನೆಯನ್ನು ಜಾರಿಗೆ ತರುವಂತೆ ಲಾಟರಿ ಚಿಲ್ಲರೆ ಮಾರಾಟಗಾರರ ರಾಜ್ಯ ಸಂಘವು ಸರ್ಕಾರವನ್ನು ಒತ್ತಾಯಿಸಿದೆ.
ರಾಜ್ಯದಲ್ಲಿ ಕಳೆದ 2007ರಿಂದ ಲಾಟರಿ ನಿಷೇಧವಿದ್ದರೂ ಅಕ್ರಮವಾಗಿ ಆನ್‌ಲೈನ್ ಲಾಟರಿಗಳು ನಡೆಯುತ್ತಿವೆ. ಇದರಿಂದ ಕರ್ನಾಟಕಕ್ಕೆ ವಾರ್ಷಿಕ 6000 ಕೋಟಿ ರೂ.ಗಳ ಆದಾಯ ನಷ್ಟವಾಗುತ್ತಿದೆ. ನೆರೆಯ ಕೇರಳ ರಾಜ್ಯ ಸರ್ಕಾರವು ಲಾಟರಿ ಯೋಜನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ ವಾರ್ಷಿಕ 6 ರಿಂದ 7 ಸಾವಿರ ಕೋಟಿ ರೂ ಲಾಭ ಮಾಡುತ್ತಿದೆ ಎಂದು ಸಂಘದ ಅಧ್ಯಕ್ಷ ಸಿ.ರಾಮಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹಾಗಾಗಿ ಕೇರಳ ಮಾದರಿ ಯೋಜನೆಯನ್ನು ಜಾರಿಗೊಳಿಸಿ, ಅದರಿಂದ ಬರುವ ಲಾಭವನ್ನು ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬಹುದು ಎಂದು ತಿಳಿಸಿದರು.
ಹಲವಾರು ರಾಜ್ಯಗಳ ಲಾಟರಿಗಳು ಮತ್ತು ಇ-ಲಾಟರಿಗಳು ಹುಲುಸಾಗಿ ಅಭಿವೃದ್ಧಿ ಹೊಂದು ತ್ತಿರುವಾಗ ನಮ್ಮ ರಾಜ್ಯದಲ್ಲಿ ನಿಷೇಧ ಹೇರಿರುವುದರಲ್ಲಿ ಅರ್ಥವಿಲ್ಲ. ಅಲ್ಲದೇ ಅನಧಿಕೃತ ಲಾಟರಿ ವ್ಯವಹಾರವನ್ನು ನಿಲ್ಲಿಸಲು ಸಹಾಯವಾಗಲಿದೆ ಎಂದರು.
ಈ ಲಾಟರಿ ಯೋಜನೆಯನ್ನು ಸರ್ಕಾರಕ್ಕೆ ಹೊರಯಾಗದ ರೀತಿಯಲ್ಲಿ ಖರ್ಚು-ವೆಚ್ಚಗಳನ್ನು ನಿರ್ವಹಿಸಲಾಗುವುದು. ಮುದ್ರಿತವಾದ ಎಲ್ಲ ಟಕೆಟ್‌ಗಳ ಹಣವನ್ನು ಮುಖ್ಯ ದಾಸ್ತಾನುಗಾರರು ಪಾವತಿಸುತ್ತಾರೆ. ಮಾರಾಟವಾಗದೆ ಉಳಿದ ಟಿಕೆಟ್‌ಗಳನ್ನು ಎಂಎಸ್‌ಐಎಲ್‌ಗೆ ಹಿಂತಿರುಗಿಸುವ ಪದ್ಧತಿ ಇಲ್ಲ. ಅಲ್ಲದೇ ಪ್ರಚಾರ ಮತ್ತು ಟಿಕೆಟ್‌ಗಳ ಮುದ್ರಣಕ್ಕೆ ತಗಲುವ ಖರ್ಚನ್ನು ಮುಖ್ಯ ದಾಸ್ತಾನುಗಾರರೇ ಮಾಡುತ್ತಾರೆ ಎಂದು ರಾಮಕೃಷ್ಣ ವಿವರಿಸಿದರು.