ಸಾರವರ್ಧಕ ಅಕ್ಕಿ ಉಪಯೋಗಿಸಿ, ಆರೋಗ್ಯವಾಗಿರಿ! ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ: ಸಾರ್ವಜನಿಕ ವಿತರಣಾ ಪದ್ದತಿಯಡಿಯಲ್ಲಿ ವಿತರಿಸಲಾಗುವ ಸಾರವರ್ಧಕ ಅಕ್ಕಿಯನ್ನು ಫಲಾನುಭವಿಗಳು ಉಪಯೋಗಿಸಿ ಆರೋಗ್ಯ ವೃದ್ದಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸಲಹೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ದಿನನಿತ್ಯದ ಆಹಾರದಲ್ಲಿ ಸಂಪೂರ್ಣ ಪೋಷಕಾಂಶಗಳು ಲಭ್ಯವಾಗದೇ ಇರುವ ಕಾರಣದಿಂದಾಗಿ, ಅನೀಮಿಯಾ, ಇರುಳುಗುರುಡುತನದಂತಹ ರೋಗಗಳು ಬರುವ ಸಾಧ್ಯತೆ ಇದೆ. ಅಲ್ಲದೇ ಹೆಚ್ಚಾಗಿ ಮಹಿಳೆಯರು ಹಾಗೂ ಮಕ್ಕಳು ಅಪೌಷ್ಠಿಕತೆಗೆ ಬಲಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇದನ್ನು ತಪ್ಪಿಸಲು ಹೆಚ್ಚಿನ ಪೋಷಕಾಂಶದ ಅಗತ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿನ ಅಪೌಷ್ಥಿಕತೆ ಹೋಗಲಾಡಿಸಿ ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಸಾರ್ವಜನಿಕ ವಿತರಣಾ ಪದ್ಧತಿಯ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲಾಗುವ ಪ್ರತಿ 50 ಕೆಜಿ ಅಕ್ಕಿಯ ಚೀಲದಲ್ಲಿ ಅರ್ಧ ಕೆಜಿಯಷ್ಟು ಪೋಷಕಾಂಶ (ವಿಟಾಮಿನ್ ಎ ಮತ್ತು ಡಿ ಐರನ್, ಪೋಲಿಕ್ ಆಸಿಡ್, ಬಿ ಕಾಂಪ್ಲೇಕ್ಸ್, ಜಿಂಕ್ ಹಾಗೂ ಐಯೋಡಿನ್) ಭರಿತ ಸಾರವರ್ಧಿತ ಅಕ್ಕಿಯಲ್ಲಿ ಬೆರೆಸಿ ಮೇ-2022ರ ಮಾಹೆಯಿಂದ ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆ ಮಾಡಲಾಗುತ್ತಿದೆ.
ಸಾರವರ್ಧಿತಗೊಳಿಸಿರುವ (ಪೋರ್ಟಿಫೈಡ್) ಅಕ್ಕಿಯಲ್ಲಿ ಕೆಲವೊಂದು ಅಕ್ಕಿಯ ಕಾಳುಗಳು ಹೊಳಪಿನಿಂದ ನೋಡಲು ಪ್ಲಾಸ್ಟಿಕ್ ರೀತಿಯಲ್ಲಿ ಕಾಣಿಸುತ್ತಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗದೇ ವಿತರಣೆಮಾಡಲಾಗುತ್ತಿರುವ ಸಾರವರ್ಧಿತ ಅಕ್ಕಿಯನ್ನು ಉಪಯೋಗಿಸಿ ಆರೋಗ್ಯವಂತರಾಗಲು ಕೋರಿದ್ದಾರೆ. ಅಷ್ಟೇಅಲ್ಲದೆ ಸಾರ್ವಜನಿಕ ವಿತರಣಾ ಪದ್ದತಿಯಡಿ ಬಿಡುಗಡೆ ಮಾಡುವ ಅಕ್ಕಿಯನ್ನು ಸ್ವಂತಕ್ಕೆ ಉಪಯೋಗಿಸತಕ್ಕದ್ದು, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬ0ದಲ್ಲಿ ಅಂತಹ ಕುಟುಂಬಕ್ಕೆ ನೀಡಿದ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಪಡಿಸಲಾಗುವುದೆಂದು ಎಚ್ಚರಿಸಿದ್ದಾರೆ.

 
                         
                       
                       
                       
                       
                       
                       
                      