ವಾಹನಗಳ ಸುರಕ್ಷಾ ನೋಂದಣಿ ಫಲಕ; ಜಾರಿಗೆ ಮುನ್ನವೇ 500 ಕೋ. ರೂ HSRP ಗೋಲ್ ಮಾಲ್?

ವಾಹನಗಳ ಸುರಕ್ಷಾ ನೋಂದಣಿ ಫಲಕ; ಜಾರಿಗೆ ಮುನ್ನವೇ 500 ಕೋ. ರೂ HSRP ಗೋಲ್ ಮಾಲ್?

ಬೆಂಗಳೂರು: ರಾಜ್ಯದಲ್ಲಿ ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ (HSRP) ಅಳವಡಿಸುವ ಯೋಜನೆ ಜಾರಿಗೆ ಮುನ್ನವೇ ಅಕ್ರಮದ ಸಂಚು ನಡೆದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಮಧ್ಯಪ್ರವೇಶಿಸಬೇಕೆಂದು ಬೆಂಗಳೂರು ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಒತ್ತಾಯಿಸಿದೆ. ಈ ಸಂಬಂಧ ತಮ್ಮ ಒಕ್ಕೂಟವು ಸಿಎಂ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿರುವ ದೂರಿನ ಆಧಾರದಲ್ಲಿ ಸೂಕ್ತ ಕ್ರಮವಹಿಸಲು ಆಗ್ರಹಿಸಿದೆ,

ಬೆಂಗಳೂರು ಪ್ರೆಸ್ ಕ್ಲಬ್’ನಲ್ಲಿ ಗುರುವಾರ (29.06.2023) ಸುದ್ದಿಗೋಷ್ಠಿ ನಡೆಸಿದ ಒಕ್ಕೂಟದ ಅಧ್ಯಕ್ಷರೂ ಆದ ಸಾಮಾಜಿಕ ಹೋರಾಟಗಾರ ಲೋಕೇಶ್ ರಾಮ್, ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಈ ಯೋಜನೆಯನ್ನು ಲಂಚದ ಆಸೆಗಾಗಿ ಹಾದಿತಪ್ಪಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಏನಿದು ಅಕ್ರಮದ ಸಂಚು?
ವಾಹನ ಕಳ್ಳತನ ತಡೆಯುವುದು, ಕದ್ದ ವಾಹನಗಳನ್ನು ಬಳಸಿ ನಡೆಯುವ ಕೃತ್ಯಗಳನ್ನು ಹಾಗೂ ಕಾನೂನು ಉಲ್ಲಂಘನೆಯಂತಹಾ ಪ್ರಕರಣಗಳನ್ನು ಬೇಧಿಸಲು ಅನುಕೂಲವಾಗುವಂತೆ HSRP ಅಳವಡಿಕೆ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ, ವಾಹನಗಳ ನಂಬರ್ ಪ್ಲೇಟ್’ನಲ್ಲಿಯೇ ಈ ತಂತ್ರಜ್ಞಾನ ಅಳವಡಿಸಲಾಗುತ್ತಿದ್ದು, ಈ ಪ್ರಕ್ರಿಯೆ ಕರ್ನಾಟಕದಲ್ಲೂ ಜಾರಿಗೆ ಬರಲಿದ್ದು ಸಾರಿಗೆ ಇಲಾಖೆಯು ನಿಯಮಗಳನ್ನು ಸಿದ್ದಪಡಿಸಿದೆ. ಇದಕ್ಕಾಗಿ HSRP ತಯಾರಕಾ ಕಂಪನಿಗಳ ಆಯ್ಕೆ ಪ್ರಕ್ರಿಯೆ ಹಳಿತಪ್ಪಿದ್ದು ಸುಮಾರು 20,000 ಹೆಚ್ಚು ಕುಟುಂಬಗಳು ಬೀದಿಗೆ ಬೀಳಲಿವೆ ಎಂಬ ಆತಂಕವೂ ಎದುರಾಗಿದೆ ಎಂದು ಲೋಕೇಶ್ ರಾಮ್ ತಿಳಿಸಿದರು.

HSRP ಯೋಜನೆಗಾಗಿ ವಿಶಿಷ್ಟ ತಂತ್ರಜ್ಞಾನದ ನಂಬರ್ ಪ್ಲೇಟ್’ಗಳನ್ನು ತಯಾರಿಸುವ ಸುಮಾರು 20 ಕಂಪನಿಗಳಿಗೆ ಕೇಂದ್ರ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ. ಆದರೆ ಕರ್ನಾಟಕದಲ್ಲಿ ಕೆಲವು ಮಾಫಿಯಾಗಳ ಒತ್ತಡಕ್ಕೊಳಗಾಗಿ ಕೇವಲ 4-5 ಕಂಪನಿಗಳ ಉತ್ಪನ್ನಗಳಿಗಷ್ಟೇ ಅನುಮತಿ ನೀಡಲು ರಹಸ್ಯ ತಯಾರಿ ನಡೆದಿದೆ. ಸಾರಿಗೆ ಇಲಾಖೆ ಅಧಿಕಾರಿಗಳ ಭಾರೀ ಪ್ರಮಾಣದ ಲಂಚದ ಆಸೆಯಿಂದಾಗಿ ಇಡೀ ಯೋಜನೆಯೇ ಹಾದಿ ತಪ್ಪುವ ಸಾಧ್ಯತೆಗಳಿವೆ ಎಂದು ಲೋಕೇಶ್ ರಾಮ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಹೊಸ ವಾಹನಗಳಲ್ಲಿ HSRP ಗೊಂದಲ ಇಲ್ಲ. ಹಳೆಯ ವಾಹನಗಳಿಗಷ್ಟೇ HSRP ಸವಾಲು ಇರುವುದು. ದೇಶದಲ್ಲಿ ಪ್ರಸಕ್ತ ಇರುವ ಸುಮಾರು 30 ಕೋಟಿ ಹಳೆಯ ವಾಹನಗಳ ಪೈಕಿ ಕರ್ನಾಟಕದಲ್ಲೇ 2 ಕೋಟಿಗಳಷ್ಟು ವಾಹನಗಳಿವೆ ಎಂದು ಅಂದಾಜಿಸಲಾಗಿದೆ. ಈ HSRPಗೆ 400ರಿಂದ 950 ರೂಪಾಯಿ ದರ ಇದ್ದು ತಯಾರಿ ವೆಚ್ಚಕ್ಕಿಂತ ದುಪ್ಪಟ್ಟು ದರದಲ್ಲಿ ಮಾರಾಟವಾಗಲಿದೆ. ಶೇಕಡಾ 50ರಷ್ಟು ಲಾಭವಿದ್ದು ಸುಮಾರು 500 ಕೋಟಿ ರೂಪಾಯಿ ಲಾಭವನ್ನು ದೋಚಲು ಕೆಲವು ಕಂಪನಿಗಳು ಅಡ್ಡ ದಾರಿ ಹಿಡಿದಿವೆ ಎಂದು ಆರೋಪಿಸಿರುವ ಲೋಕೇಶ್ ರಾಮ್. HSRPಯನ್ನು ವಾಹನ ತಯಾರಿಕಾ ಸಂಸ್ಥೆಗಳು ಅಥವಾ ನಿರ್ದಿಷ್ಟ ಡೀಲರುಗಳೇ ವಿತರಿಸಬೇಕೆಂಬ ನಿಯಮ ಜಾರಿಗೆ ಬಂದರೆ ಕೆಲ ಮಧ್ಯವರ್ತಿ ನಿಯಂತ್ರಣಾ ಮಾಫಿಯಾ ಹುಟ್ಟಿಕೊಂಡು ಮಾರುಕಟ್ಟೆಯಲ್ಲಿ ಏಕಸ್ವಾಮ್ಯದ ಅಧಿಪತ್ಯ ಸ್ಥಾಪಿಸುತ್ತದೆ. ಇದರಿಂದ ಸಾರ್ವಜನಿಕರು ತೊಂದರೆಗೊಳಗಾಗುವುದಷ್ಟೇ ಅಲ್ಲ, ಈವರೆಗೂ ನಂಬರ್ ಪ್ಲೇಟ್ ನಿರ್ವಹಿಸುತ್ತಿರುವ ಸುಮಾರು 20 ಸಾವಿರ ಕುಟುಂಬಗಳೂ ಬೀದಿಗೆ ಬೀಳಬಹುದು ಎಂದವರು ಹೇಳಿದರು.

500 ಕೋ. ರೂ HSRP ಗೋಲ್ ಮಾಲ್?

HSRP ಪೂರೈಸುವ ಅವಕಾಶವನ್ನು ಕೆಲವೇ ಕಂಪನಿಗಳಿಗಷ್ಟೇ ಸೀಮಿತಗೊಳಿಸುವ ಕ್ರಮ ಸರಿಯಾದುದಲ್ಲ. ಎಲ್ಲಾ ಅನುಮೋದಿತ ಕಂಪನಿಗಳೂ ತಮ್ಮ ಉತ್ಪನ್ನಗಳನ್ನು ನೀಡುವ ಅವಕಾಶ ಸಿಗಬೇಕಿದೆ. ಒಂದು ವೇಳೆ ಸರ್ಕಾರ ಅಥವಾ ಅಧಿಕಾರಿಗಳು ಒಳ ಒಪ್ಪಂದ ಮಾಡಿ ನಿರ್ದಿಷ್ಟ ಕಂಪೆನಿಗಳಿಗಷ್ಟೇ HSRP ಪೂರೈಸುವ ಅವಕಾಶ ನೀಡಿದಲ್ಲಿ, ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಸಾಧನವನ್ನು ಖರೀದಿಸುವ ಗ್ರಾಹಕನ ಆಯ್ಕೆ ಸ್ವಾತಂತ್ರವನ್ನೂ ಮೊಟಕುಗೊಳಿಸಿದಂತಾಗುತ್ತದೆ. ಭ್ರಷ್ಟಾಚಾರ ಮುಕ್ತವಾಗಿ ಯೋಜನೆ ಜಾರಿಯಾಗಬೇಕಾದರೆ, ಎಲ್ಲಾ ಅನುಮೋದಿತ ಕಂಪನಿಗಳ HSRP ವಿತರಣೆಗೆ ರಾಜ್ಯದಲ್ಲಿ ಅವಕಾಶ ಸಿಗಬೇಕು, ಜನಸ್ನೇಹಿ ವ್ಯವಸ್ಥೆಯಲ್ಲಿ ಸ್ವಉದ್ಯೋಗಾಕಾಂಕ್ಷಿಗಳಿಗೂ ಅವಕಾಶ ಸಿಗುವಂತೆ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಸಿಎಂ ಹಾಗೂ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಾಹನ ತಯಾರಕರು-ವಿತರಕರಷ್ಟೇ HSRP ಪೂರೈಸುವ ನಿಯಮ ಸೀಮಿತವಾದಲ್ಲಿ, ಈ ನಂಬರ್ ಪ್ಲೇಟ್ ಹಾಳಾದ ಸಂದರ್ಭದಲ್ಲಿ ವಾಹನ ಮಾಲೀಕರು ಬದಲಿ HSRPಗಾಗಿ ತಾವು ಹಿಂದೆ ಖರೀದಿಸಿದ ಸ್ಥಳಕ್ಕೆ ಹೋಗಬೇಕಾಗುತ್ತದೆ. ಇದರಿಂದಾಗಿ 500 ರೂಪಾಯಿಯ HSRP ಖರೀದಿಸಲು ಸಾವಿರಾರು ರೂಪಾಯಿ ಖರ್ಚುಮಾಡಬೇಕೆ ಎಂಬ ಪ್ರಶ್ನೆ ಮೂಡಿದೆ. ಈ ನಡುವೆ ವರ್ಷದ ಹಿಂದಷ್ಟೇ, ತಪ್ಪುಗಳನ್ನು ಸರಿಪಡಿಸುವುದಾಗಿ ಸರ್ಕಾರವು ಹೈಕೋರ್ಟಿಗೆ ತಿಳಿಸಿದೆ. ಆದರೆ, ಪ್ರಭಾವಿಗಳ ಗುಂಪು ನಿಗೂಢವಾಗಿ ಯೋಜನೆಯನ್ನು ಕಬಳಿಸಲು ಪ್ರಯತ್ನವನ್ನು ಮುಂದುವರಿಸಿದೆ. ಹಾಗಾಗಿ ಈಗಿನ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಲೋಕೇಶ್ ರಾಮ್ ಅವರು ಸರ್ಕಾರದ ಗಮನಸೆಳೆದಿದ್ದಾರೆ.


ಸಂಪರ್ಕ ವಿಳಾಸ :
ಲೋಕೇಶ್ ರಾಮ್, ಅಧ್ಯಕ್ಷರು, ಬೆಂಗಳೂರು ವಿವಿ ಸ್ನಾತಕೋತ್ತರ ಮತ್ತು
ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ, ಬೆಂಗಳೂರು, ಮೊಬೈಲ್: 8050418143

Leave a Reply

Your email address will not be published. Required fields are marked *

error: Content is protected !!