ಕಚ್ಚಾ ತೈಲ ಬೆಲೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆ ಇಂಧನ ಬೆಲೆಯಲ್ಲಿ ಏರಿಕೆ ಆಗುತ್ತಿದೆ – ಸಚಿವ ಭೈರತಿ ಬಸವರಾಜ್
ದಾವಣಗೆರೆ: ಕಚ್ಚಾ ತೈಲ ಬೆಲೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆ ಇಂಧನ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಡಾಲರ್ ಬೆಲೆ ವ್ಯತ್ಯಯವೂ ಇದಕ್ಕೆ ಕಾರಣವಾಗಿದೆ. ಕೆಲವೇ ದಿನಗಳಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇಂಧನ ಬೆಲೆ ಹೆಚ್ಚಳ ಆಗುವುದಕ್ಕೆ ಕಚ್ಚಾ ತೈಲ ಬೆಲೆ ಏರಿಕೆಯೇ ಮುಖ್ಯ ಕಾರಣವಾಗಿದ್ದು, ಶೀಘ್ರದಲ್ಲಿಯೇ ಇಳಿಮುಖವಾಗುವ ಸಾಧ್ಯತೆಯಿದೆ ಎಂದು ಭರವಸೆ ನೀಡಿದರು.
ಸಿಂದಗಿ, ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ನಾನು ಅಲ್ಲಿ ಕೆಲಸ ಮಾಡಿರುವುದರಿಂದ ಮತದಾರರ ನಾಡಿಮಿಡಿತ ಅರ್ಥ ಮಾಡಿಕೊಂಡಿದ್ದೇನೆ. ಜನರು ನಮಗೆ ಅಶೀರ್ವಾದ ಮಾಡಿದ್ದಾರೆ ಎಂಬ ವಿಶ್ವಾಸವಿದೆ. ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಜನ ಬೆಂಬಲ ನೀಡಿದ್ದಾರೆ. ನಾಳೆ ಎಲ್ಲವೂ ಗೊತ್ತಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಟ್ ಕಾಯಿನ್ ಅಂದ್ರೆ ಏನು ಅಂತಲೇ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿಯೂ ಇಲ್ಲ. ಇದರಲ್ಲಿ ಯಾರ ಪಾತ್ರವಿದೆ ಎಂಬುದು ತಿಳಿದಿಲ್ಲ. ಈ ಬಗ್ಗೆ ಸಿಎಂ ಅವರೇ ಉತ್ತರಿಸಿದ್ದಾರೆ ಎಂದರು.
ದಾನ ಎಂದರೆ ಏನೆಂಬುದನ್ನು ಪುನೀತ್ ರಾಜಕುಮಾರ್ ನೋಡಿ ಕಲಿಯಬೇಕಿದೆ. ನಾವೆಲ್ಲ ೧ ಲಕ್ಷ ದಾನ ಮಾಡಿದರೆ ಟಿವಿ, ಪತ್ರಿಕೆಯಲ್ಲಿ ಪ್ರಚಾರ ಪಡಿಯುತ್ತೇವೆ. ಆದರೆ, ಪುನೀತ್ ಅವರು ಎಲೆಮರೆ ಕಾಯಿಯಂತೆ ದಾನ ಮಾಡಿದ್ದಾರೆ. ಹಲವು ಸಂಸ್ಥೆಗಳ ಮೂಲಕ ಜನಸೇವೆ ಮಾಡಿದ್ದಾರೆ. ಅವರ ಸೇವೆ ಕಾರ್ಯಗಳನ್ನು ನೋಡಿದಾಗ ನನಗೆ ನಾಚಿಕೆಯಾಯ್ತು, ದಾನ ಅಂದರೆ ಅವರಂತೆ ಮಾಡಬೇಕು. ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ಎಲ್ಲರೂ ಅದನ್ನೇ ಅನುಕರಿಸಬೇಕು ಎಂದರು.