ಮಾಯಕೊಂಡದ ಗ್ರಾಮ ಒನ್ ಕೇಂದ್ರಕ್ಕೆ ವರ್ಚುಯಲ್ ಮೂಲಕ ಸಿ.ಎಂ.ಚಾಲನೆ: ಗ್ರಾಮ ಒನ್ ಕೇಂದ್ರದಿಂದ ಗ್ರಾಮೀಣರ ಬದುಕು ಹಸನು – ಬೈರತಿ ಬಸವರಾಜ್

ದಾವಣಗೆರೆ: ದಾವಣಗೆರೆ ತಾಲ್ಲೂಕು ಮಾಯಕೊಂಡ ಗ್ರಾಮದ ಗ್ರಾಮ ಒನ್ ಕೇಂದ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರ್ಚುಯಲ್ ವೇದಿಕೆ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು 100 ಕ್ಕೂ ಹೆಚ್ಚು ಸೇವೆಗಳು ಒಂದೇ ಸೂರಿನಡಿ ದೊರೆಯುತಿದ್ದು, ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಯೋಜನೆಗಳ ಪ್ರಯೋಜನ ಸಾರ್ವಜನಿಕರಿಗೆ ಸಿಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಸಾಕಾರಕ್ಕೆ ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಹಾಗೂ ಜಿಲ್ಲಾಧಿಕಾರಿಗಳು ಯೋಜನೆಯ ಪರಿಣಾಮಕಾರಿ ಅನುಷ್ಟಾನಕ್ಕೆ ನೇತೃತ್ವ ವಹಿಸಬೇಕೆಂದರು.

ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಅವರು ಈಗಾಗಲೇ ಜಿಲ್ಲೆಯಲ್ಲಿ 201 ಗ್ರಾಮ ಒನ್ ಕೇಂದ್ರಗಳು ಕಾರ್ಯನಿರ್ವಹಿಸುತಿದ್ದು 2.70 ಲಕ್ಷ ಅರ್ಜಿಗಳು ವಿಲೇವಾರಿಯಾಗಿ ಸಾರ್ವಜನಿಕರು ಪ್ರಯೋಜನ ಪಡೆದುಕೊಂಡಿದ್ದಾರೆ. ಮತ್ತೆ 60 ಕೇಂದ್ರಗಳನ್ನು ಆರಂಭಿಸಲು ಆದೇಶಿಸಲಾಗಿದೆ ಇಂತಹ ಒಂದು ಕ್ರಾಂತಿಕಾರಿ ಸೌಲಭ್ಯವನ್ನು ನೀಡಿ ಗ್ರಾಮೀಣರ ಜೀವನ ಹಸನು ಮಾಡಿದುದಕ್ಕಾಗಿ ತಮ್ಮನ್ನು ಅಭಿನಂದಿಸುತ್ತೇನೆಂದರು.

ಇಲ್ಲಿನ ಅಕ್ಕಪಕ್ಕದ ಗ್ರಾಮಸ್ಥರು ದಾವಣಗೆರೆಗೆ ಹೋಗಿ ಬರಲು 200 ರಿಂದ 300 ರೂ ಖರ್ಚಾಗುತ್ತಿದ್ದು ಅದರೊಂದಿಗೆ ಸಮಯವೂ ಉಳಿತಾಯವಾಗಿದೆ. ಎಲ್ಲಾ ದಾಖಲೆಗಳು ಗ್ರಾಮ ಒನ್ ಕೇಂದ್ರದಲ್ಲಿ ಸಿಗುವುದರಿಂದ ಸಾರ್ವಜನಿಕರಲ್ಲಿ ಸಮಾಧಾನ ತಂದಿದೆ ಎಂದರು.
ಈಗಾಗಲೇ ನಾನು ಹಲವಾರು ಕೇಂದ್ರಗಳಿಗೆ ಭೇಟಿ ನೀಡಿದ್ದು ಕೇಂದ್ರಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಇಂದು ಅನೇಕ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ಕಾರ್ಡ್ ನೀಡಲಾಗುತ್ತಿದೆ, ವಿಶೇಷವಾಗಿ ಮಹಿಳೆಯೊಬ್ಬರು 5 ಯೋಜನೆಗಳ ಪ್ರಯೋಜನ ಪಡೆದುಕೊಂಡಿದ್ದಾರೆಂದರು.
ಮಾಯಕೊಂಡ ಕ್ಷೇತ್ರದ ಶಾಸಕರಾದ ಪ್ರೊ.ಲಿಂಗಣ್ಣ ಮಾತನಾಡಿ ನನ್ನ ಕ್ಷೇತ್ರದಲ್ಲಿ ಗ್ರಾಮ ಒನ್ ಕೇಂದ್ರವನ್ನು ಮುಖ್ಯಮಂತ್ರಿಗಳು ಉಧ್ಘಾಟಿಸುತ್ತಿರುವುದು ಬಹಳ ಖುಷಿಯ ವಿಚಾರ, ಸಾರ್ವಜನಿಕರಿಗೆ ಉಪಯೋಗವಾಗುವ ಗ್ರಾಮ ಒನ್ ಕೇಂದ್ರ ಆರಂಭವಾಗಿರುವುದು ಸಂತಸ ತಂದಿದೆ, ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗಲಿ ಎಂದರು.

ಸಿ.ಎಂ. ಅಭಯ : ಕಾರ್ಯಕ್ರಮದಲ್ಲಿ ಶ್ಯಾಗಲೆ ಗ್ರಾಮದ ಅನುಷ ಎಂಬ ವಿಧವೆ ಮಹಿಳೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ನಾನು ಈಗಾಗಲೆ ಈ ಕೇಂದ್ರದ ಮೂಲಕ 5 ಯೋಜನೆಗಳಲ್ಲಿ ಪ್ರಯೋಜನ ಪಡೆದಿದ್ದು, ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ, ನನ್ನ ಅತ್ತೆ ಮಾವ ನನ್ನನ್ನು ಮನೆಯಿಂದ ಹೊರ ಹಾಕಿದ್ದು ಜೀವನ ಕಟ್ಟಿಕೊಳ್ಳಲು ದಯಮಾಡಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಆ ಮಹಿಳೆ ವಿಧವೆ ಇದಾರೆ, ಅಂಥವರಿಗೆ ಪ್ರಾಶಸ್ತ್ಯ ಕೊಡಬೇಕು ಈ ಬಗೆಗೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಆ ಮಹಿಳೆಗೆ ನೆರವಾಗಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ವಿಜಯ ಮಹಾಂತೇಶ ದಾನಮ್ಮನವರ್, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ತಹಶೀಲ್ದಾರ್ ಗಿರೀಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!