ರಸ್ತೆಯ ಮೇಲೆ ನೀರು ನಿಲ್ಲದಂತೆ ಮಾಡುವುದೇ ಜಾಣತನ – ಡಾ. ಎಚ್ ಕೆ ಎಸ್. ಸ್ವಾಮಿ,

ಚಿತ್ರದುರ್ಗ: ಹಿಂದಿನ ಕಾಲದಲ್ಲಿ ರಸ್ತೆಯ ಮೇಲೆ ನೀರು ನಿಲ್ಲದಂತೆ ಮಾಡುತ್ತಿದ್ದರು, ಈಗಿನ ಕಾಲದಲ್ಲಿ ರಸ್ತೆಯ ಮೇಲೆ ನೀರು ನಿಲ್ಲಿಸುವುದೇ ಕಾರ್ಯಕ್ರಮವಾಗಿದೆ. ತರಳಬಾಳು ನಗರದ 1ನೇ ಮುಖ್ಯ ರಸ್ತೆಯಲ್ಲಿ ಮಳೆ ಬಂದ ತಕ್ಷಣ ರಸ್ತೆ ತುಂಬೆಲ್ಲ ನೀರು ತುಂಬಿ, ಜನರು ನೀರಿನ ಮೇಲೆ ನಡೆಯುವಂಥಾಗಿದೆ. ರಸ್ತೆಯ ಮೇಲೆ ನೀರು ನಿಂತರೆ ರಸ್ತೆಯ ಗುಣಮಟ್ಟ ಹಾಳಾಗುತ್ತದೆ, ರಸ್ತೆಯ ಮೇಲೆ ನೀರು ನಿಂತರೆ ಗುಂಡಿಗಳಾಗಿ ಅಪಘಾತವಾಗುತ್ತದೆ, ರಸ್ತೆಗೆ ಖರ್ಚು ಮಾಡಿದ ಹಣವೆಲ್ಲ ವ್ಯರ್ಥವಾಗುತ್ತದೆ, ಮತ್ತೆ ರಸ್ತೆ ಮಾಡಬೇಕಾಗುತ್ತದೆ ಅದಕ್ಕೆ ಸಾರ್ವಜನಿಕರ ಹಣ ಬಳಕೆಯಾಗುತ್ತದೆ, ಆದ್ದರಿಂದ ಆದಷ್ಟು ರಸ್ತೆಯ ಮೇಲೆ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿ, ಅಕ್ಕಪಕ್ಕ ಚರಂಡಿಗಳನ್ನು ಸರಿಯಾಗಿ ನಿರ್ಮಿಸಿ, ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕೆಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ಜಿಲ್ಲಾಡಳಿತಕ್ಕೆ, ನಗರಸಭೆಗೆ ವಿನಂತಿಸಿಕೊಂಡಿದ್ದಾರೆ.
ಮಳೆ ಬಂದು ನಿಂತ ತಕ್ಷಣ, ರಸ್ತೆ ಮೇಲೆ ಒಂದೂವರೆ ಅಡಿಯಷ್ಟು ನೀರು ನಿಂತು, ಗಾಡಿ ಚಲಾಯಿಸುವವರಿಗೆ ರಸ್ತೆ ಕಾಣದೇ ಅಪಘಾತಗಳಾಗುತ್ತಿವೆ, ಜನರು ಗಾಡಿ ಓಡಿಸಲು ಭಯ ಬೀತರಾಗುತ್ತಾರೆ, ಮಕ್ಕಳಂತೂ ರಸ್ತೆ ದಾಟಲು ಹರ ಸಾಹಸ ಪಡುತ್ತಾರೆ. ಶಾಲಾ ಬಸ್ಸುಗಳು ಬಂದಾಗ ನೀರಿನಲ್ಲಿ ಮಕ್ಕಳನ್ನು ಇಳಿಸಿ ಹೋಗುತ್ತಿದ್ದಾರೆ. ಹಾಗಾಗಿ ರಸ್ತೆಗಳ ಮೇಲೆ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು ಎಂದರು.

ರಸ್ತೆಯ ಮೇಲೆ ನೀರು ನಿಂತರೆ ರಾತ್ರಿ ಸಂಚರಿಸುವರಿಗಂತೂ ಅಪಘಾತ ಗ್ಯಾರಂಟಿ, ಎಲ್ಲಿ ಗುಂಡಿ ಇದೆ ಎಲ್ಲಿ ಮ್ಯಾನ್ ಹೋಲ್ ಇದೆ ಎಂಬುದು ಗೊತ್ತಾಗದೆ ಅಪಘಾತಗಳು ಹೆಚ್ಚಾಗುತ್ತಿವೆ. ರಸ್ತೆ ಮೇಲೆ ನಿಂತ ನೀರು ರಾತ್ರಿ ಹೊತ್ತು ಬಾಗಿಲು ಮುಚ್ಚಿದ ಅಂಗಡಿ ಒಳಗಡೆ ನೀರು ಹರಿದು ಸಾಮಾನುಗಳೆಲ್ಲ ನಷ್ಟವಾಗಿ, ಅಂಗಡಿ ಮಾಲೀಕರಿಗೆ ಚಿಂತೆಯಾಗುತ್ತದೆ. ರಾತ್ರಿ ಅಂಗಡಿ ಮುಚ್ಚಿ ಮನೆಗೆ ಹೋದರೆ, ರಸ್ತೆಯ ಮೇಲಿನ ನೀರಿನ ಭಯ ಕಾಡುತ್ತಿರುತ್ತದೆ ಎಂದರು.
ರಸ್ತೆಯ ಮೇಲೆ ನೀರು ನಿಂತರೆ ನಡೆದಾಡುವವರಿಗೆ, ಶಾಲಾ ಮಕ್ಕಳಿಗೆ ನೀರು ಸಿಡಿದು ಅವರ ಯೂನಿಫಾರ್ಮ್, ಸಮವಸ್ತ್ರ ಬಟ್ಟೆಗಳು ನಾಶವಾಗಿ, ಅವರು ಶಾಲೆಗೆ ಹೋಗದಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜಾರಿ ಬೀಳುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ, ರಸ್ತೆ ದಾಟಲು ಸಾಧ್ಯವಾಗುವುದಿಲ್ಲದೆ, ಕಾಲು ಕೈ ಮುರಿದುಕೊಂಡು ಆಸ್ಪತ್ರೆ ಸೇರುವಂಥಾಗುತ್ತದೆ, ಆದ್ದರಿಂದ ನಗರಸಭೆಗಳು, ರಸ್ತೆ ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.
ರಸ್ತೆ ಪಕ್ಕದಲ್ಲಿರುವ ಚರಂಡಿಗಳಿಗೆ, ಅಂಗಡಿ ಮಾಲೀಕರು, ಹೋಟೆಲ್ ಮಾಲೀಕರು, ಕಸ ಎಸೆದು ಚರಂಡಿಗಳನ್ನು ಮುಚ್ಚಿರುತ್ತಾರೆ. ಮಳೆ ಬಂದಾಗ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದಂತಾಗುತ್ತದೆ, ಜನರು ಸಹ ಕಸವನ್ನ ಎಲ್ಲೆಂದರಲ್ಲಿ ಎಸೆಯುತ್ತಾರೆ, ಹಾಗಾಗಿ ಸಾರ್ವಜನಿಕರು ಸಹ ಪ್ಲಾಸ್ಟಿಕ್ ಅನ್ನು ಎಲ್ಲಿಂದರಲ್ಲಿ, ಎಸೆಯದೇ, ಕಸದ ಗಾಡಿಗೆ ಹಾಕಿ ಚರಂಡಿಗಳನ್ನ ಚೆನ್ನಾಗಿ ಇಟ್ಟುಕೊಂಡರೆ ಮಳೆಯ ನೀರು ಸರಾಗವಾಗಿ ಹರಿಯುತ್ತದೆ ಎಂದು ಪತ್ರಿಕೆ ಸಾರ್ವಜನಿಕರನ್ನು ವಿನಂತಿಸಿಕೊಂಡಿದ್ದಾರೆ.