ಮದುವೆಗೆಂದು ಗಿಫ್ಟ್ ಕೊಟ್ಟಿದ್ದ ಹೋಮ್ ಥಿಯೇಟರ್ ಸ್ಫೋಟ: ಇಬ್ಬರು ಸಾವು

ಛತ್ತೀಸಗಢ: ಮದುವೆಗೆ ಉಡುಗೊರೆಯಾಗಿ ನೀಡಿದ್ದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ.
ಛತ್ತೀಸಗಢದ ಕಬಿರ್ಧಾಮ ಜಿಲ್ಲೆಯ ಚಮಾರಿ ಗ್ರಾಮದಲ್ಲಿ ಮದುವೆಗೆ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಗಿಫ್ಟ್ ನೀಡಲಾಗಿತ್ತು. ಇದು ಬಳಸುವ ವೇಳೆ ಸ್ಫೋಟಗೊಂಡು ನವವಿವಾಹಿತ ಮತ್ತು ಆತನ ಅಣ್ಣ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಸೋಮವಾರ ಈ ದುರಂತ ಸಂಭವಿಸಿದೆ. ಎಲೆಕ್ಟ್ರಾನಿಕ್ ಸಾಧನದಲ್ಲಿಯೇ ಸ್ಫೋಟಕವನ್ನು ಅಳವಡಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ ಎಂದು ಮಂಗಳವಾರ ಪೊಲೀಸರು ಹೇಳಿದ್ದಾರೆ.
ಕಳೆದ ವಾರ ಹೇಮೇಂದ್ರ ಮೆರಾವಿ (22) ಅಂಜನಾ ಎಂಬುವರನ್ನು ಮದುವೆಯಾಗಿದ್ದರು. ಉಡುಗೊರೆಯಾಗಿ ಬಂದಿದ್ದ ಮ್ಯೂಸಿಕ್ ಸಿಸ್ಟಮ್ ಅನ್ನು ಬಳಸಲು ಪ್ರಯತ್ನಿಸಿದಾಗ ಅದು ಸ್ಫೋಟಗೊಂಡಿದೆ. ಇದರ ಪರಿಣಾಮ ಹೋಮ್ ಥಿಯೇಟರ್ ಕೊಠಡಿಯ ಗೋಡೆ ಮತ್ತು ಮೇಲ್ಚಾವಣಿ ಕುಸಿದಿದೆ ಎಂದು ಇಲ್ಲಿಯ ಪೊಲೀಸ್ ವರಿಷ್ಠಾಧಿಕಾರಿ ಲಾಲ್ ಉಮೇದ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.