ಮಾಫಿಯಾ ಹಿಡಿತದಲ್ಲಿದೆಯೇ ಪಶ್ಚಿಮ ಬಂಗಾಳ?: ಬಿರ್ಭೂಮ್ ಹಿಂಸಾಚಾರ ವರದಿ

ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ ನೇತೃತ್ವದ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಡಳಿತವಿರುವ ಪಶ್ಚಿಮ ಬಂಗಾಳ ಮಾಫಿಯಾದ ಹಿಡಿತದಲ್ಲಿದೆ. ಮಾಫಿಯಾ ಬಂಗಾಳವನ್ನು ಆಳುತ್ತಿದೆ ಎಂದು ಬಿಜೆಪಿಯ ಸತ್ಯಶೋಧನಾ ತಂಡ ತನ್ನ ವರದಿಯಲ್ಲಿ ತಿಳಿಸಿದೆ. ಕಳೆದ ವಾರ ಬಿರ್ಭೂಮ್ ಜಿಲ್ಲೆಯಲ್ಲಿ ಎಂಟು ಜನರನ್ನು ಸಜೀವ ದಹನ ಮಾಡಿದ ಘೋರ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಬಿಜೆಪಿಯ ಸತ್ಯಶೋಧನಾ ತಂಡ ತನ್ನ ವರದಿಯನ್ನು ನೀಡಿದೆ.
ಬಗ್ತುಯಿ ಗ್ರಾಮದ ಹತ್ಯೆಗಳು ರಾಜ್ಯ ಪ್ರಾಯೋಜಿತ ಸುಲಿಗೆ, ಗೂಂಡಾ ತೆರಿಗೆ, ಪರ್ಸೆಂಟ್ ಮನಿಯ ಪರಿಣಾಮವಾಗಿದೆ ಎಂದು ಬಿಜೆಪಿ ವರದಿ ಹೇಳಿದೆ. ಇದರಲ್ಲಿ ಬಂಗಾಳದ ಆಡಳಿತ ಪಕ್ಷದ ನಾಯಕರು ಲಂಚ ತೆಗೆದುಕೊಳ್ಳಲು ಬಳಸುವ ಪದಗಳನ್ನು ಉಲ್ಲೇಖಿಸಲಾಗಿದೆ. ಹತ್ಯೆಗೆ ಫಲಾನುಭವಿಗಳ ನಡುವಿನ ಲಂಚದ ಮೊತ್ತದ ಪೈಪೋಟಿ ಮತ್ತೊಂದು ಕಾರಣ ಎಂದು ಅದು ಹೇಳಿದೆ. “ಸ್ಥಳೀಯ ನಿವಾಸಿಗಳು ತಮ್ಮ ಜೀವ ಮತ್ತು ಆಸ್ತಿಯ ಬೆದರಿಕೆಯ ಭಯದಿಂದ ತಮ್ಮ ಮನೆಗಳನ್ನು ತೊರೆದಿದ್ದಾರೆ” ಎಂದು ವರದಿ ಹೇಳಿಕೊಂಡಿದೆ. ಹಿಂದೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದಂತಹ ಸಂಸ್ಥೆಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಕರೆತರಲು ಆತ್ಮವಿಶ್ವಾಸವನ್ನು ಮೂಡಿಸುವ ಕ್ರಮಗಳನ್ನು ಸ್ಥಾಪಿಸಲು ಶಿಫಾರಸು ಮಾಡಿದೆ.
ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಭಾದು ಶೇಖ್ ಕಚ್ಚಾ ಬಾಂಬ್ ದಾಳಿಯಲ್ಲಿ ಹತನಾದ ನಂತರ ಪ್ರತೀಕಾರವಾಗಿ ಸಜೀವ ದಹನ ಮಾಡಲಾಗಿದೆ. ರಾಮ್ಪುರಹತ್ ಪಟ್ಟಣದ ಬಳಿಯ ಬೊಗ್ಟುಯಿ ಗ್ರಾಮದಲ್ಲಿ ಮಾರ್ಚ್ 22 ರಂದು ಆರು ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಅವರ ಮನೆಗೆ ಬೀಗ ಹಾಕಿ ಸಜೀವ ದಹನ ಮಾಡಲಾಯಿತು. ಒಂದು ದಿನದ ನಂತರ ಸುಟ್ಟ ಮೃತದೇಹಗಳು ಪತ್ತೆಯಾಗಿದ್ದು, ಬಹುತೇಕ ಒಂದೇ ಕುಟುಂಬಕ್ಕೆ ಸೇರಿದ್ದಾಗಿವೆ. ಬಿಜೆಪಿ ತಂಡ ಈಗಾಗಲೇ ಕೋಲ್ಕತ್ತಾ ತಲುಪಿದ ನಂತರ ಗ್ರಾಮಕ್ಕೆ ಭೇಟಿ ನೀಡಲು ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ ಎಂದು ಬಿಜೆಪಿ ತಂಡ ಹೇಳಿದೆ. ಮುಖ್ಯಮಂತ್ರಿಯವರ ಬಲವಂತದ ಭೇಟಿಯಿಂದಾಗಿ ತೃಣಮೂಲ ಗೂಂಡಾಗಳು ಸತ್ಯಶೋಧನಾ ತಂಡದ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು.
“ತನಿಖಾ ತಂಡದ ತನಿಖೆ ವೇಳೆ ಒಬ್ಬ ಅಧಿಕಾರಿ ಅಥವಾ ಕಾನ್ಸ್ಟೆಬಲ್ ಕೂಡ ಕಾಣಿಸಲಿಲ್ಲ ಮತ್ತು ಸತ್ಯಶೋಧನಾ ತಂಡ ದಾಳಿ ಮಾಡಿದಾಗ ಯಾರೂ ರಕ್ಷಣೆಗೆ ಬಂದಿಲ್ಲ” ಎಂದು ಸಮಿತಿಯ ವರದಿ ಹೇಳಿದೆ. ಮಾತ್ರವಲ್ಲದೇ ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನಗಳು ವಿಫಲವಾಗಿವೆ ಎಂದು ವರದಿ ಹೇಳಿದೆ. ಆದರೆ ಮಮತಾ ಬ್ಯಾನರ್ಜಿ ಅವರು ಬಿಜೆಪಿ ತಂಡದ ವರದಿಯನ್ನು ಖಂಡನೆ ಮಾಡಿದ್ದಾರೆ ಮತ್ತು ಅಂತಹ ವರದಿಗಳು ತನಿಖೆಗೆ ಅಡ್ಡಿಪಡಿಸಿ ಹಳಿ ತಪ್ಪಿಸುತ್ತವೆ ಎಂದು ಹೇಳಿದ್ದಾರೆ.
“ಇವುಗಳು ರಾಜಕೀಯ ಪ್ರೇರಿತ ವರದಿಗಳು. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಈ ಧೋರಣೆಯನ್ನು ನಾನು ಖಂಡಿಸುತ್ತೇನೆ. ತನಿಖೆ ನಡೆಯುತ್ತಿರುವಾಗ ಯಾವುದೇ ಪಕ್ಷದ ಹಸ್ತಕ್ಷೇಪ ಮಾಡಬಾರದು. ಇದು ಸಂಪೂರ್ಣ ಅಧಿಕಾರದ ದುರುಪಯೋಗವಾಗಿದೆ. ಸೇಡಿನ ಮತ್ತು ಪಕ್ಷಪಾತವಾದ ಈ ನಡೆಯನ್ನು ನಾನು ಖಂಡಿಸುತ್ತೇನೆ. ಹೀಗೆ ಮಾಡುವು ದರಿಂದ ಅವರು ಮಾತ್ರ ಈ ದೇಶದಲ್ಲಿ ಉಳಿಯುತ್ತಾರೆ ಎಂದು ಬಿಜೆಪಿ ಭಾವಿಸುತ್ತದೆ” ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.