Wheeling: ಶಾಂತಿಸಾಗರ ಬಳಿ ಬೈಕ್ ವ್ಹೀಲಿಂಗ್ ಪ್ರಕರಣ ದಾಖಲು, ಯುವ ಜನತೆಗೆ ಎಸ್ ಪಿ ಎಚ್ಚರಿಕೆಯ ಸಂದೇಶ

ದಾವಣಗೆರೆ: (Wheeling) ದಿನಾಂಕ : 11.02.2025 ರಂದು ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಗಿರಿ – ದಾವಣಗೆರೆ ರಸ್ತೆಯ ಶಾಂತಿಸಾಗರ ಬಳಿ ಇರುವ ಸಿದ್ದಪ್ಪ ದೇವಾಸ್ಥಾನದ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ಬೈಕ್ ಸವಾರನು ತನ್ನ ಬೈಕಿನ ಹಿಂಬದಿಯಲ್ಲಿ ಇನ್ನೊಬ್ಬನನ್ನು ಕೂರಿಸಿಕೊಂಡು ಹೆಲ್ಮೆಟ್ ಧರಿಸದೇ, ಬೈಕ್ ವ್ಹೀಲಿಂಗ್ ನಡೆಸಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರಸ್ತೆಯಲ್ಲಿ ಅತೀ ವೇಗವಾಗಿ & ನಿರ್ಲಕ್ಷತನದಿಂದ ಚಾಲನೆ ಮಾಡುತ್ತಾ ಬೈಕ್ ನ ಮುಂದಿನ ಗಾಲಿಯನ್ನು ಹಾರಿಸಿಕೊಂಡು ಹಿಂಬದಿಯ ಒಂದೇ ಗಾಲಿಯಲ್ಲಿ ಚಾಲನೆ (ಬೈಕ್ ವ್ಹಿಲಿಂಗ್) ಮಾಡುತ್ತಾ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ & ಸಾರ್ವಜನಿಕರಿಗೆ ತೊಂದರೆಯುಂಟಾಗುವ ರೀತಿಯಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು.
ಸದರಿ ಪೋಟೋ ವಿಡಿಯೋವನ್ನು ಪರಿಶೀಲನೆ ಮಾಡಿದಾಗ ಬೈಕ್ ಸವಾರ ಜಮೀರ್ @ ಪಾಪಾ, ಚನ್ನಗಿರಿ ಟೌನ್, ಎಂದು ತಿಳಿದು ಬಂದಿದ್ದು, ಸಂಚಾರ ನಿಯಮಗಳನ್ನು ಉಲ್ಲಂಘನೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟು ಆಗುವಂತೆ ಬೈಕ್ ಸವಾರಿ ಮಾಡುತ್ತಿದ್ದ ಜಮೀರ್ @ ಪಾಪಾ, ಚನ್ನಗಿರಿ ಟೌನ್, ದಾವಣಗೆರೆ ಜಿಲ್ಲೆ, ಈತನ ವಿರುದ್ಧ ಬಸವಾ ಪಟ್ಟಣ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೆ ನಂ 22/2025 ರಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ದಾವಣಗೆರೆ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
*ಜಿಲ್ಲಾ ಪೊಲೀಸ್ ವತಿಯಿಂದ ಯುವ ಜನತೆಗೆ ಸೂಚನೆ :*
ಜಿಲ್ಲೆಯಲ್ಲಿ ಕೆಲವು ಕಡೆ ಹುಚ್ಚು ಕ್ರೇಜ್ ಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹಾಕಲು ಸಂಚಾರ ನಿಯಮಗಳ ಉಲ್ಲಂಘನೆ ಮಾಡಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದೆರೆಯುಂಟಾಗುವ ರೀತಿಯಲ್ಲಿ ಹಾಗೂ ತಮ್ಮ ಜೀವಕ್ಕೆ ಹಾನಿಯಾಗುವಂತೆ ವಾಹನ ಚಾಲನೆ ಮಾಡುವಂತ ಯುವಕರು ಕಂಡುಬಂದಿದ್ದು, ಅತೀವೇಗವಾಗಿ, ಹೆಲ್ಮೇಟ್ ಧರಿಸದೇ, ಚಾಲನ ಪರವಾನಿಗೆ ಇಲ್ಲದೇ, ಸಂಚಾರ ನಿಯಮಗಳನ್ನು ಪಾಲನೆ ಮಾಡದೇ ಸಂಚರಿಸುವ ಬೈಕ್ ಸವಾರರಿಗೆ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವತಿಯಿಂದ ಎಚ್ಚರಿಕೆ ನೀಡಲಾಗಿದೆ