ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಸ್ಥಗಿತಗೊಳ್ಳುತ್ತಾ? KSRTC ಸ್ಪಷ್ಟನೆ ಹೀಗಿದೆ..
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಸದ್ಯವೇ ಕೊನೆಗೊಳ್ಳುತ್ತಾ? ಮಹಿಳೆಯರಿಗಾಗಿ ಜಾರಿಗೆ ಬಂದಿರುವ ಉಚಿತ ಬಸ್ ಪ್ರಯಾಣದ ಸೌಲಭ್ಯ ಅಂತ್ಯಗೊಳ್ಳುತ್ತಾ? ಈ ಬಗ್ಗೆ ಅಂತೆಕಂತೆಗಳ ಸುದ್ದಿ ಹರಿದಾಡುತ್ತಿದ್ದು, ಜನ ಗೊಂದಲಕ್ಕೀಡಾಗಿದ್ದಾರೆ. ಆದರೆ ಇದು ಸುಳ್ಳು ವದಂತಿ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಶಕ್ತಿ ಯೋಜನೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದೆ.
ಕೆ ಎಸ್ ಆರ್ ಟಿ ಸಿ ಹೇಳುತ್ತಿರುವುದೇನು?
ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ‘ಶಕ್ತಿ’ ಯೋಜನೆ ಕೊನೆಗೊಳ್ಳಲಿದ್ದು,ಮಹಿಳೆಯರಿಗೆ ಒದಗಿಸುತ್ತಿರುವ ಉಚಿತ ಪ್ರಯಾಣ ಶೀಘ್ರದಲ್ಲಿಯೇ ಸ್ಥಗಿತಗೊಳ್ಳಲಿದೆ ಎಂಬುದಾಗಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದ ವಿಷಯವಾಗಿರುತ್ತದೆ.ಈ ರೀತಿಯ ಯಾವುದೇ ಗೊಂದಲದ ಸಂದೇಶಗಳನ್ನು ಸಾರ್ವಜನಿಕ ಪ್ರಯಾಣಿಕರು ನಂಬಬಾರದು ಎಂದು ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿ ಪ್ರಕಟಣೆ ತಿಳಿಸಿದೆ. ಈ ಬಗ್ಗೆ ಸಾರ್ವಜನಿಕರಿಗೆ ಕಾಲಕಾಲಕ್ಕೆ ಸಮರ್ಪಕವಾದ ಮಾಹಿತಿಯನ್ನು ಒದಗಿಸುವುದಾಗಿ ತಿಳಿಸಿರುವ ಕೆ ಎಸ್ ಆರ್ ಟಿ ಸಿ ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಯು ಎಂದಿನಂತೆ ಮುಂದುವರೆಯಲಿದೆ ಸ್ಪಷ್ಟಪಡಿಸಿದೆ.