ಮಹಿಳೆಯರೇ ಒಬ್ಬರೇ ಮನೆಯಲ್ಲಿದ್ದೀರಾ? ಎಚ್ಚರ.. ಎಚ್ಚರ
ದಾವಣಗೆರೆ: ಮಹಿಳೆಯರೇ ಒಬ್ಬರೇ ಮನೆಯಲ್ಲಿದ್ದೀರಾ? ಎಚ್ಚರ. ಹೀಗೂ ಮನೆಗೆ ಬರುತ್ತಾರೆ ಕಳ್ಳರು. ಮನೆಯಲ್ಲಿ ಒಬ್ಬರೇ ಇದ್ದಾರೆಂದು ತಿಳಿದರೆ ಸಾಕು, ಒಳ ಪ್ರವೇಶಿಸಲು ಕಳ್ಳರಿಗೆ ಅನೇಕ ನೆಪಗಳಿವೆ. ಅದರಲ್ಲಿ ಈಗ ಮದುವೆಯ ಇನ್ವಿಟೇಷನ್ ಕೊಡಲು ಬಂದಿದ್ದೇವೆ ಎನ್ನುವುದು ಹೊಸ ನೆಪ.
ಹೌದು, ಮದುವೆಯ ಲಗ್ನ ಪತ್ರಿಕೆ ಕೊಡುವುದಿದೆ ಎಂದು ಹೇಳಿ ಒಳ ಪ್ರವೇಶಿಸಿದ ಕಳ್ಳನೊಬ್ಬ ನೇರ ಗೃಹಿಣಿಯ ಕುತ್ತಿಗೆಯಲ್ಲಿದ್ದ ಬಂಗರಾದ ಸರಕ್ಕೆ ಕೈ ಹಾಕಿದ್ದಾನೆ. ಅದೃಷ್ಟ ವಶಾತ್ ಆಕೆ ಜೋರಾಗಿ ಕಿರಿಚಿಕೊಂಡಿದ್ದರಿಂದ ಅಕ್ಕ ಪಕ್ಕದವರು ಸೇರಬಹುದೆಂಬ ಭಯಕ್ಕೆ ಸರ ಕೀಳುವ ಯತ್ನ ಬಿಟ್ಟು ಪಕ್ಕದಲ್ಲಿಯೇ ಇದ್ದ ಮೊಬೈಲ್ ಎತ್ತಿಕೊಂಡು ಪರಾರಿಯಾಗಿದ್ದಾನೆ.
ಹೌದು, ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಾಗರತ್ವ ಅವರು ಈ ಬಗ್ಗೆ ದೂರು ನೀಡಿದ್ದರು. ಮನೆಯಲ್ಲಿ ಬಾಗಿಲು ಮುಂದೆ ಬಿಟ್ಟುಕೊಂಡು ಟಿವಿ ನೋಡುತ್ತಾ ಕುಳಿತಿದ್ದಾಗ ಈ ಘಟನೆ ನಡೆದಿದೆ ಎಂದವರು ದೂರಿನಲ್ಲಿ ಹೇಳಿದ್ದಾರೆ.
ದೂರಿನ ತನಿಖೆ ನಡೆಸಿದ ಪೊಲೀಸರು ಸದ್ಯ ಶ್ರೀರಾಮನಗರದ ವಾಸಿ ಮಂಜುನಾಥ ಭಜಂತ್ರಿ ಹಾಗೂ ಪಿ.ಮಂಜುನಾಥ ಎಂಬುವವರನ್ನು ಬಂಧಿಸಿದ್ದಾರೆ. ಅವರಿಂದ ಒಂದು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿತರನ್ನು ಪತ್ತೆ ಮಾಡಿದ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶಶಿಧರ ಯು.ಜೆ, ಪಿಎಸ್‌ಐ ಮಂಜುಳ ಮತ್ತು ಸಿಬ್ಬಂದಿಗಳಾದ ಪ್ರಕಾಶ್ ಟಿ, ಶಂಕರ ಆರ್ ಜಾಧವ್, ತಿಮ್ಮಣ್ಣ ಎನ್ ಆರ್, ಮಂಜಪ್ಪ ಎಂ, ಷಣ್ಮುಖ.ಕೆ, ಶಿವರಾಜ ಎಂ. ಎಸ್ ಪುಷ್ಪಲತಾ, ರಾಘವೇಂದ್ರ, ಶಾಂತರಾಜ್ ಅವರನ್ನು ಎಸ್ಪಿ ಡಾ. ಅರುಣ್ ಕೆ. ಶ್ಲ್ಯಾಘಿಸಿದ್ದಾರೆ.