Women’s Commission:  ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಂದ ಪ್ರಗತಿ ಪರಿಶೀಲನಾ ಸಭೆ, ತುರ್ತು ಸಂದರ್ಭದಲ್ಲಿ ಆತ್ಮ ರಕ್ಷಣೆ, ಸಹಾಯವಾಣಿ ಸಂಖ್ಯೆ ತಿಳಿಸಿ; ಡಾ; ನಾಗಲಕ್ಷ್ಮೀ ಚೌಧರಿ

004
ದಾವಣಗೆರೆ: ( Women’s Commission) ಮಹಿಳೆ ಹಾಗೂ ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಕಡಿವಾಣ ಹಾಕಲು ಶಾಲಾ, ಕಾಲೇಜುಗಳಲ್ಲಿ ಆತ್ಮ ರಕ್ಷಣಾ ಕಲೆ, ಕೌಶಲ್ಯತೆ ಮತ್ತು ತುರ್ತು ಸಹಾಯವಾಣಿಗಳ ಬಗ್ಗೆ ವ್ಯಾಪಕ ಅರಿವು ಮೂಡಿಸುವ ಅಗತ್ಯವಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ; ನಾಗಲಕ್ಷ್ಮೀ ಚೌಧರಿ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಿಳೆಯರ ಸಬಲೀಕರಣದ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಇಲಾಖೆಯಿಂದ ಸರ್ಕಾರಿ ಶಾಲಾ, ಕಾಲೇಜು, ಹಾಸ್ಟೆಲ್‍ಗಳಲ್ಲಿನ ಹೆಣ್ಣು ಮಕ್ಕಳಿಗೆ ಆತ್ಮ ರಕ್ಷಣೆಯ ಬಗ್ಗೆ ಅರಿವು ಮೂಡಿಸಿದ್ದು ಇದೇ ರೀತಿ ಖಾಸಗಿಯ ಎಲ್ಲಾ ಶಾಲಾ, ಕಾಲೇಜು ಮತ್ತು ಹಾಸ್ಟೆಲ್‍ಗಳಲ್ಲಿಯು ಬಾಲಕಿಯರು ಹಾಗೂ ಹೆಣ್ಣು ಮಕ್ಕಳ ರಕ್ಷಣೆ, ದೌರ್ಜನ್ಯ ತಡೆ ಕುರಿತು ವ್ಯಾಪಕ ಅರಿವು ಮೂಡಿಸುವುದರಿಂದ ಪೋಕ್ಸೋ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಲಿವೆ. ಕೆಲವು ಶಾಲಾ, ಕಾಲೇಜುಗಳಲ್ಲಿ ಶಿಕ್ಷಕರಿಂದಲೇ ಲೈಂಗಿಕ ಕಿರುಕುಳ ಪ್ರಕರಣಗಳನ್ನು ನೋಡಲಾಗಿದೆ. ಆದ್ದರಿಂದ ಹೆಣ್ಣು ಮಕ್ಕಳು ದೌರ್ಜನ್ಯಕ್ಕೆ ಒಳಗಾದಾಗ ಧೈರ್ಯವಾಗಿ ದೂರುಗಳನ್ನು ನೀಡುವ ನಿಟ್ಟಿನಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ವ್ಯಾಪಕವಾಗಿ ಮಾಡಬೇಕಾಗಿದೆ ಎಂದರು.
ಸಿಸಿಟಿವಿ ಹೆಚ್ಚಳಕ್ಕೆ ಸೂಚನೆ; ನಗರ ಹಾಗೂ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯು ಸಿಸಿ ಕ್ಯಾಮೆರಾಗಳನ್ನು ಹೆಚ್ಚಿಸಬೇಕು. ಮೊನ್ನೆ ನಡೆದ ಹುಬ್ಬಳಿ ಪ್ರಕರಣದಲ್ಲಿ ಸಿಸಿಟಿವಿಯಿಂದ ತುರ್ತಾಗಿ ಅಪರಾಧಿಯನ್ನು ಪತ್ತೆ ಮಾಡಲು ಸಾಧ್ಯವಾಯಿತು. ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಸಂಪೂರ್ಣ ನಿಗಾ ವಹಿಸಲು ತಿಳಿಸಿದರು.
ದೌರ್ಜನ್ಯ ಸೇರಿದಂತೆ ವಿವಿಧ ಕಾರಣಗಳಿಂದ ಮಹಿಳೆಯರ ಕೊಲೆ ಪ್ರಕರಣಗಳು ವರದಿಯಾಗಿದ್ದು ಮಹಿಳೆಯರ ಮೇಲಿನ ಯಾವುದೇ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. 2023 ರಿಂದ 2025 ರ ವರೆಗೆ 19 ಮಹಿಳಾ ಕೊಲೆ ಪ್ರಕರಣ, 15 ವರದಕ್ಷಿಣ ಸಾವು, ಅನೈತಿಕ ಸಾಗಣೆ ತಡೆ ಐಟಿಪಿ ಕಾಯಿದೆಯಡಿ 14 ಪ್ರಕರಣ, ಕಿರುಕುಳ ಪ್ರಕರಣದಡಿ 152, ಡಿಪಿ ಕಾಯಿದೆಯಡಿ 183, ಮಹಿಳಾ ಕಿರುಕುಳದಡಿ 475 ಪ್ರಕರಣಗಳು ದಾಖಲಾಗಿವೆ. ಮಹಿಳೆ ಕಾಣೆಯಡಿ 1370 ಮಹಿಳೆಯರು ಹಾಗೂ 170 ಹುಡುಗಿಯರು ಕಾಣೆಯಾದ ಪ್ರಕರಣ ದಾಖಲಿಸಿದ್ದು ಹಲವು ಪ್ರಕರಣಗಳಲ್ಲಿ ಪತ್ತೆಹಚ್ಚಲಾಗಿದೆ. ಮತ್ತು ಕೆಲವು ಪ್ರಕರಣಗಳು ತನಿಖೆ ಹಂತದಲ್ಲಿವೆ.
ಮಹಿಳೆಯರ ಮೇಲಿನ ದೌರ್ಜನ್ಯ ಸೇರಿ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಮಹಿಳಾ ಕೌನ್ಸಿಲಿಂಗ್ ಕೇಂದ್ರವನ್ನು ಆರಂಭಿಸಲು ರಾಷ್ಟ್ರೀಯ ಮಹಿಳಾ ಆಯೋಗ ನಿರ್ಧರಿಸಿದ್ದು ರಾಜ್ಯದಲ್ಲಿಯು ಈ ಕೇಂದ್ರವನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಕಡಿಮೆ ಮಾಡಲು ದಾವಣಗೆರೆಯಲ್ಲಿ ಹೊಸದಾಗಿ ಮಹಿಳೆಯರ ಕೌನ್ಸಿಲಿಂಗ್ ಕೇಂದ್ರವನ್ನು ಆದಷ್ಟು ಶೀಘ್ರದಲ್ಲಿಯೇ ಆರಂಭಿಸಲಾಗುತ್ತದೆ ಎಂದರು.
ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ; ಅನೇಕ ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮವಾಗಿ ಅಂಗಡಿ, ಮನೆಗಳಲ್ಲಿ ಮದ್ಯವನ್ನು ಮಾರಾಟ ಮಾಡುವುದರಿಂದ ಕುಟುಂಬಗಳು ಹಾಳಾಗಿವೆ ಎಂದು ಮಹಿಳೆಯರ ದೂರುಗಳಾಗಿವೆ. ಯಾವುದೇ ಕಾರಣಕ್ಕೂ ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಬಾರದೆಂದರು.  ಮೂಲಭೂತ ಸೌಕರ್ಯ ಕಲ್ಪಿಸಿ; ಪಂಚಾಯಿತಿಗಳಿಂದ ಗ್ರಾಮಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡಬೇಕಾಗಿದೆ. ಜಗಳೂರು ತಾ; ಹನುಮಂತಪುರ ಗೊಲ್ಲರಹಟ್ಟಿಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯದ ಕೊರತೆ ಇದ್ದು ಇಲ್ಲಿ ಸರಿಯಾದ ರಸ್ತೆ, ಆರ್.ಓ, ಬಸ್ ಸೌಕರ್ಯಗಳಿಲ್ಲ. ಇಲ್ಲಿ ತುರ್ತಾಗಿ ಕೆಎಸ್‍ಆರ್‍ಟಿಸಿ ಬಸ್ ನೀಡಲು ಮತ್ತು ವಿದ್ಯುತ್ ಪರಿವರ್ತಕ ಹಾಕಿ ನಿರಂತರ ವಿದ್ಯುತ್ ನೀಡಲು ತಿಳಿಸಿದರು.
ಗ್ರಾಮಸಭೆ; ಗ್ರಾಮ ಪಂಚಾಯಿತಿಗಳಲ್ಲಿ ನಿಯಮಿತವಾಗಿ ಗ್ರಾಮಸಭೆಗಳು ನಡೆಯುವಂತೆ ನೋಡಿಕೊಳ್ಳಬೇಕು. ಗ್ರಾಮಸಭೆಗಳಲ್ಲಿ ಮಹಿಳೆಯರು ಬಂದು ತಮಗೆ ಬೇಕಾದ ಅನುಕೂಲತೆಗಳ ಬಗ್ಗೆ ಕೇಳುವರು, ಇದರಿಂದ ಅನೇಕ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದ ಅವರು ಆಸ್ಪತ್ರೆಗಳಲ್ಲಿ ಸ್ವಚ್ಚತೆ, ಔಷಧಗಳ ದಾಸ್ತಾನು, ಹೊರಗುತ್ತಿಗೆಯಡಿ ಕಾರ್ಮಿಕರಿಗೆ ಆಗುತ್ತಿರುವ ಶೋಷಣೆ ತಪ್ಪಿಸಲು ಆದಷ್ಟು ಬೇಗ ಜಿಲ್ಲಾ ಕಾರ್ಮಿಕರ ಸೊಸೈಟಿ ಆರಂಭಿಸಲು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!