ಪೋಷಕರು ಬಾಲಕಾರ್ಮಿಕರ ಪದ್ದತಿಯನ್ನ ವಿರೋಧಿಸಬೇಕು -ಡಾ. ಎಚ್. ಕೆ. ಎಸ್. ಸ್ವಾಮಿ.
ಚಿತ್ರದುರ್ಗ : ಈ ವರ್ಷ ಕರೋನದಿಂದ ಶಾಲೆಯಿಲ್ಲದೇ ಮಕ್ಕಳನ್ನ ಬಹಳಷ್ಟು ಕಡೆ ಪೋಷಕರೇ ದುಡಿಮೆಗೆ ಕಳಿಸಿರುವರು. ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡದೇ, ದುಡಿಮೆಗೆ ಹಚ್ಚುತ್ತಿದ್ದಾರೆ. ಹಾಗಾಗಿ ಈ ವರ್ಷ ಲಕ್ಷಾಂತರ ಮಕ್ಕಳು ಇನ್ನೂ ಬಾಲಕಾರ್ಮಿಕರಾಗಿ ಗ್ಯಾರೇಜಿನಲ್ಲಿ, ಹೋಟೆಲ್‍ಗಳಲ್ಲಿ, ಬಟ್ಟೆ ಅಂಗಡಿಗಳಲ್ಲಿ, ರಸ್ತೆಬದಿಯ ತರಕಾರಿ ವ್ಯಾಪಾರ ಮಾಡುವುದರಲ್ಲಿ, ಅಕ್ರಮ ಇಟ್ಟಿಗೆ ಭಟ್ಟಿಗಳಲ್ಲಿ ದುಡಿಯುತ್ತಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರು ವಿಫಲರಾದಂತೆ ಕಾಣಿಸುತ್ತಿದೆ. ಇನ್ನೂ ಮುಂದಾದರು, ಕರೋನ ನಿಯಂತ್ರಣವಾದ ನಂತರ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.
ಅವರು ನಗರದ ತರಳಬಾಳು ನಗರದ ಒಂದನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ “ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ” ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೋಷಕರು ಮಕ್ಕಳ ಪ್ರತಿಭೆಗಳನ್ನು ಹೊರತರಲು ಪ್ರಯತ್ನಿಸಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರು ಸ್ವಂತ ಕಾಲ ಮೇಲೆ ನಿಲ್ಲುವಂತೆ ಮಾಡುವಂಥ ವ್ಯವಸ್ಥೆಯನ್ನು ಮಾಡಬೇಕು. ಸಮಾಜವು ಸುಸ್ಥಿತಿಯಲ್ಲಿರಬೇಕು ಅಂದರೆ ಮಕ್ಕಳ ಭವಿಷ್ಯ ರೂಪಿತವಾಗಬೇಕು. ಬಹಳಷ್ಟು ಕಡೆ ಜನರು ಮಕ್ಕಳನ್ನು ಶೋಷಣೆ ಮಾಡಿ, ಅವರ ದುಡಿಮೆಯಲ್ಲಿ ಬದುಕಲು ಪ್ರಯತ್ನಿಸುತ್ತಿದ್ದಾರೆ. ಬಡದೇಶಗಳಲ್ಲಿ ಹೆಚ್ಚು ಬಾಲಕಾರ್ಮಿಕರನ್ನ ನಾವು ಕಾಣುತ್ತಿದ್ದೇವೆ, ಶ್ರೀಮಂತ ರಾಷ್ಟ್ರಗಳಲ್ಲಿ ಮಕ್ಕಳು ಪೂರ್ಣ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಶಾಲೆಗಳಲ್ಲಿ ಬಿಸಿಯೂಟ ಪದ್ಧತಿ ಜಾರಿ ಬಂದ ಮೇಲೆ ಮಕ್ಕಳು ಶಾಲೆಗೆ ಬರುವುದನ್ನೇ ಕಲಿತುಕೊಂಡಿದ್ದಾರೆ ಎಂದರು.
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ದೇಶದಲ್ಲಿ ಏನೆಲ್ಲ ಕ್ರಮಗಳನ್ನು ಜಾರಿಗೆ ತಂದರೂ ನಿಯಂತ್ರಣ ಮಾತ್ರ ಆಗಿಲ್ಲ, 14 ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ, ಬಾಲ ಕಾರ್ಮಿಕರಿಗಾಗಿ ವಿಶೇಷ ಶಾಲೆಗಳನ್ನ ತೆರೆಯಬೇಕು, ಅವರಿಗೆ ವಿಷೇಶ ಸೌಲಭ್ಯ ನೀಡಿ ಬಾಲಕಾರ್ಮಿಕ ಪದ್ಧತಿ ಮುಕ್ತ ಸಮಾಜ ನಿರ್ಮಾಣವಾಗಬೇಕು. ಸಾರ್ವಜನಿಕರು ಸಹ ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಧ್ವನಿ ಎತ್ತಬೇಕು, ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿಯ ಒತ್ತಡ, ಆರ್ಥಿಕ ಸಮಸ್ಯೆಯಿಂದ ಮಕ್ಕಳನ್ನು ದುಡಿಮೆಗೆ ಹಚ್ಚುತ್ತಿರುವುದರಿಂದ ಮಕ್ಕಳ ಮುಗ್ದತೆ, ಕನಸು, ನಾಶವಾಗದಂತೆ ತಡೆಯಬೇಕು. ಅವರ ಬಾಲ್ಯ ಸ್ವಚ್ಚಂದವಾಗಿ ಅರಳಿಕೊಳ್ಳಲು ಸೂಕ್ತವಾದ ವಾತಾವರಣ ನಿರ್ಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳ ಶೋಷಣೆಯ ಹಲವು ಭಿತ್ತಿಪತ್ರಗಳ ಪ್ರದರ್ಶನ ಮಾಡಿ, ಬಾಲ ಕಾರ್ಮಿಕ ವಿರೋಧಿ ಗೀತೆಗಳನ್ನ ಹಾಡಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಮಕ್ಕಳಾದ ಗೀತಾ, ರಚನ, ಪ್ರೇರಣ, ಸುರಕ್ಷಾ, ಅಂಶುಲ್, ಭರತ್, ಶಶಿ, ಐಶ್ವರ್ಯ ಹಾಜರಿದ್ದರು.