ಯೋಗ, ಪ್ರಾಣಾಯಾಮದಿಂದ ದೈಹಿಕ, ಮಾನಸಿಕ ಸದೃಢತೆ ಸಾಧ್ಯ: ಡಾ. ರತ್ನ

 

ದಾವಣಗೆರೆ: ಮಾನಸಿಕ ನೆಮ್ಮದಿ ಹಾಗೂ ದೇಹದಲ್ಲಿ ನಿತ್ಯ ಚೈತನ್ಯ ತುಂಬುವ ಶಕ್ತಿ ಯೋಗದಲ್ಲಿದ್ದು, ನಿಯಮಿತವಾಗಿ ಯೋಗಾಭ್ಯಾಸದಲ್ಲಿ ತೊಡಗಿದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದು ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರತ್ನ ಡಿ.ಎಂ ಹೇಳಿದರು.

ಸೋಮವಾರ ನಗರದ ದೇವರಾಜ್ ಅರಸ್ ಬಡಾವಣೆಯ ಪತಂಜಲಿ ಸಭಾಂಗಣದಲ್ಲಿ ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವತಿಯಿಂದ ಹಮ್ಮಿಕೊಂಡಿದ್ದ ‘ಪ್ರತಿದಿನ ಉಚಿತ ಯೋಗ ತರಬೇತಿ’ ಶಿಬಿರದ ಉದ್ಘಾಟನೆ ನೇರವರಿಸಿ ಅವರು ಮಾತನಾಡಿದರು.

ಯೋಗವೆಂಬುದು ಕೇವಲ ವ್ಯಾಯಾಮವಲ್ಲ, ಇದು ಒಂದು ಜೀವನ ಶೈಲಿ. ಪತಂಜಲಿ ಮುನಿಯು ಯೋಗವನ್ನು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿಗಳೆಂಬ ಎಂಟು ಅಷ್ಟಾಂಗ ಯೋಗದ ಮೂಲಕ ವಿಭಾಗಿಸಿದ್ದು, ಸಾಧಕನಾದವನು ಅಭ್ಯಾಸ-ವೈರಾಗ್ಯಗಳನ್ನು ರೂಢಿಸಿಕೊಂಡು ಚಿತ್ತವನ್ನು ಏಕಾಗ್ರ ಗೊಳಿಸಲು ಎಲ್ಲ ದಿಕ್ಕುಗಳಲ್ಲಿಯೂ ಹರಿದು ಹಂಚಿ ಹೋಗುವ ಮನಃಶಕ್ತಿಯನ್ನು ಸಂಚಯಿಸಲು ಯತ್ನಿಸಬೇಕು ಎಂದರು.

ಪ್ರಾಣಾಯಾಮವು ಹಿಂಸೆ, ಕಳವು, ಕಾಮಾತುರತೆ, ಅಸತ್ಯ ಮತ್ತು ಪರರಿಂದ ಬಯಸುವುದನ್ನು ದೂರವಿಡುವಂತೆ ಮಾಡುತ್ತದೆಯಲ್ಲದೆ ಮಾನಸಿಕವಾಗಿ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ನಿಯಮಗಳ ಅಭ್ಯಾಸವು ಸಂತೋಷ, ತಪಸ್ಸು, ಆತ್ಮಾವಲೋಕನ ಮತ್ತು ವಾಸ್ತವತೆಗೆ ಶರಣಾಗುವಂತೆ ಮಾಡುವುದರಿಂದ ದೇಹವನ್ನು ದಂಡಿಸಿ, ಮಾಂಸಖಂಡಗಳನ್ನು ಬಲಿಷ್ಠಗೊಳಿಸುವುದಲ್ಲದೆ ದೈಹಿಕ-ಮಾನಸಿಕ ಶಾಂತಿಯನ್ನು ಒದಗಿಸುತ್ತದೆ ಎಂದರು.

ಪ್ರಾಣಾಯಾಮದ ಅಭ್ಯಾಸವು ಒಂದು ಕ್ರಮಬದ್ಧವಾದ ಉಸಿರಾಟದ ಪ್ರಕ್ರಿಯೆ. ಇದು ಶ್ವಾಸಕೋಶಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಹಾಗೂ ದೇಹಕ್ಕೆ ಹೆಚ್ಚು ಆಮ್ಲಜನಕವನ್ನು ಒದಗಿಸುವುದರಿಂದ ದೇಹದ ಉಲ್ಲಾಸಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

ತಜ್ಞ ವೈದ್ಯ ಡಾ.ಗಂಗಾಧರ ವರ್ಮ ಬಿ.ಆರ್ ಮಾತನಾಡಿ, ಪಂಚ ಮಹಾಭೂತಗಳಿಂದ ಮನುಷ್ಯನ ಶರೀರ ಸೃಷ್ಟಿಯಾಗಿದೆಯೆಂಬ ವೇದಾಂತದ ತತ್ವವನ್ನು ನಿಸರ್ಗೋಪಚಾರ ಹಾಗೂ ಯೋಗವು ಮಾನ್ಯ ಮಾಡಿದೆ. ಹೀಗಾಗಿ ಶರೀರದ ಆರೋಗ್ಯ ರಕ್ಷಣೆ ಮತ್ತು ರೋಗ ನಿವಾರಣೆ, ಎರಡರಲ್ಲೂ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪಾತ್ರ ಹಿರಿಯದು ಎಂದರು.

ಮಾನಸಿಕ ಉದ್ವೇಗ ಅಥವಾ ಮಾನಸಿಕ ಒತ್ತಡವು ಮನಸ್ಸಿನ ಸಮತೋಲನವನ್ನು ಏರುಪೇರು ಮಾಡುತ್ತದೆ. ಮಾನಸಿಕ ಉದ್ವೇಗವು ತೀವ್ರವಾದ ಬೇಕು ಬೇಡಗಳು, ರಾಗ ದ್ವೇಷಗಳು, ಇಚ್ಛೆ-ನಿಚ್ಛೆಗಳಿಂದ ಕಾಣಿಸಿಕೊಳ್ಳುತ್ತದೆ. ಹಾಗೂ ಈ ಅಸಮತೋಲನವು ಪ್ರಾಣದ ಹರಿಯುವಿಕೆಯಲ್ಲಿ ಅಡ್ಡಿ ಅಡಚಣೆಯನ್ನುಂಟು ಮಾಡಿ ವ್ಯಾಧಿಯಾಗಿ ಕಾಣಿಸಿಕೊಳ್ಳುತ್ತದೆ. ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯು ಇಂದು ಪ್ರತಿಯೊಬ್ಬರ ಮನೆ ಮಾತಾಗಿರುವುದಕ್ಕೆ ಕಾರಣ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಬರುವ ಸಾಧಕರು ಮತ್ತು ಇಲ್ಲಿನ ಮುತುವರ್ಜಿಯ ಕಾಳಜಿ ಎಂದರು.

ಯೋಗ ಶಿಕ್ಷಕರಾದ ಆನಂದ್ ಕುಮಾರ್ ಮಾತನಾಡಿ, ಯೋಗವನ್ನು ಇಂದಿನಿಂದ ಆಸ್ಪತ್ರೆಯ ಆವರಣದಲ್ಲಿ ಪ್ರತಿ ದಿನ ಹೇಳಿಕೊಡಲಾಗುವುದು. ಯೋಗದ ಅಭ್ಯಾಸವನ್ನು ಪ್ರತಿಯೊಬ್ಬರು ಮಾಡುವ ಮೂಲಕ ಆರೋಗ್ಯವಂತರಾಗಬೇಕು ಎಂಬುದು ಸರ್ಕಾರದ ಮೂಲ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ರಾಜೇಶ್ವರಿ, ಲಕ್ಷ್ಮೀದೇವಿ, ರಾಮಾಂಜನೇಯ, ಈಶ್ವರ, ಪವಿತ್ರ, ವಿಜಯಮ್ಮ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!