ಜ್ವಾಲಾಮುಖಿಯ ಮೆಗಾ ಸ್ಫೋಟದಿಂದ ನಿರ್ಮಾಣವಾಯ್ತು ಅದ್ಭುತ ದ್ವೀಪ
ಪ್ರಕೃತಿಯ ಬಗ್ಗೆ ಎಷ್ಟೇ ಸಂಶೋಧನೆ, ಅಧ್ಯಯನಗಳನ್ನು ಮಾಡಿದರೂ ಕೂಡ ಭೂಮಿಯ ಗರ್ಭದಲ್ಲಿ ಅದೆಷ್ಟೋ ವಿಸ್ಮಯಗಳು ಅಡಗಿರುತ್ತವೆ. ಅಂತಹವುಗಳಲ್ಲಿ ಸದ್ಯ, ಪ್ರಾಕೃತಿಕ ವಿಸ್ಮಯದ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ನೀವು ಭೂಮಿಯಡಿಯಿಂದ ಬೆಂಕಿಯುಗುಳುವ ಜ್ವಾಲಾಮುಖಿಯ ಬಗ್ಗೆ ಕೇಳಿರಬಹುದು. ಆದರೆ ಜ್ವಾಲಾಮುಖಿಯಿಂದಾಗಿ ದ್ವೀಪವೊಂದು ನಿರ್ಮಾಣವಾಗುವುದನ್ನು ಕಂಡಿದ್ದೀರಾ? ಅಂತಹದ್ದೊಂದು ವಿಸ್ಮಯ ಜಪಾನ್ ದೇಶದಲ್ಲಿ ನಡೆದಿದ್ದು, ಈ ವಿಚಾರ ಸದ್ಯ ವ್ಯಾಪಕ ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ.
ದ್ವೀಪರಾಷ್ಟ್ರ ಎಂದೇ ಕರೆಯಲ್ಪಡುವ ಜಪಾನ್ ದೇಶದಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್ ತಿಂಗಳ ಕೊನೆಯಲ್ಲಿ ಒಗಸವಾರ ದ್ವೀಪದ ಬಳಿ ನೀರಿನೊಳಗಿಂದ ಸ್ಪೋಟಗೊಂಡ ಜ್ವಾಲಾಮುಖಿಯು ಈ ದ್ವೀಪವನ್ನು ನಿರ್ಮಿಸಿದೆ. ಈ ಘಟನೆಯು ನಿರಂತರವಾಗಿ ಬದಲಾಗುತ್ತಿರುವ ಭೌಗೋಳಿಕ ಪ್ರಕ್ರಿಯೆಯ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಿದೆ. 100 ಮೀಟರ್ ವ್ಯಾಪ್ತಿ ಹೊಂದಿರುವ ಈ ದ್ವೀಪ ಫ್ರಿಟೋಮ್ಯಗ್ರ್ಮ ಮೂಲಕ ನಿರ್ಮಾಣವಾಗಿದೆ.
ಮೂಲಗಳ ಪ್ರಕಾರ 2023ರ ಅಕ್ಟೋಬರ್ 21ರಿಂದಲೇ ಇಲ್ಲಿ ನೀರಿನೊಳಗಿನಿಂದ ಜ್ವಾಲಾಮುಖಿ ಸ್ಪೋಟಿಸಲು ಆರಂಭವಾಯ್ತು. ಈ ನೈಸರ್ಗಿಕ ಪ್ರಕ್ರಿಯೆ 10 ದಿನಗಳ ವರೆಗೆ ಮುಂದುವರೆದು ಅಂತಿಮವಾಗಿ ಸಮುದ್ರದ ಮೇಲೆ ದ್ವೀಪ ಒಂದರ ನಿರ್ಮಾಣಕ್ಕೆ ಇದು ಕಾರಣವಾಯ್ತು. ಐವೋಟು ದ್ವೀಪದ ಕರಾವಳಿಯಿಂದ ಸುಮಾರು 1 ಕಿಲೋ ಮೀಟರ್ ದೂರದಲ್ಲಿ ಇದು ಸಂಭವಿಸಿದ್ದು, ಎರಡನೇ ಮಹಾ ಯುದ್ಧಕ್ಕೆ ಈ ಪ್ರದೇಶ ಸಾಕ್ಷಿಯಾಗಿತ್ತು.
ಈ ರೀತಿ ಜ್ವಾಲಾಮುಖಿಯಿಂದ ದ್ವೀಪ ರಚನೆಯಾಗುತ್ತಿರುವುದು ಜಪಾನ್ ನಲ್ಲಿ ಇದೇ ಮೊದಲೇನಲ್ಲ. ಬೋನಿನ್ ದ್ವೀಪಗಳು ಎಂದು ಕರೆಯಲ್ಪಡುವ ಒಗಸವರ ದ್ವೀಪದ ಸರಪಳಿಯು ಸುಮಾರು 30 ದ್ವೀಪಗಳನ್ನು ಹೊಂದಿದ್ದು, ಕೆಲವೆಡೆ ಜ್ವಾಲಾಮುಖಿಗಳು ಇನ್ನೂ ಕೂಡ ಜೀವಂತವಾಗಿವೆ. ಇದಕ್ಕೂ ಮುನ್ನ 2013ರಲ್ಲಿ ಇಲ್ಲಿ ದ್ವೀಪವೊಂದು ನೀರಿನೊಳಗಿನ ಜ್ವಾಲಾಮುಖಿಯಿಂದ ನಿರ್ಮಾಣವಾಗಿತ್ತು ಎನ್ನಲಾಗಿದೆ.
ಈ ವಿಚಿತ್ರ ನೈಸರ್ಗಿಕ ಪ್ರಕ್ರಿಯೆ ಬಗ್ಗೆ ಮಾತನಾಡಿರುವ ಟೋಕಿಯೋ ವಿಶ್ವವಿದ್ಯಾನಿಲಯದ ಭೂಕಂಪನ ಸಂಶೋಧಕ ಪುಕಾಶಿ ಮೆನೋ, ‘ಅಕ್ಟೋಬರ್ ಅಂತ್ಯದ ವೇಳೆಗೆ ಈ ಪ್ರದೇಶವನ್ನು ಪರಿಶೀಲಿಸಿದಾಗ ಜ್ವಾಲಾಮುಖಿ ಸ್ಪೋಟದ ಹೊಗೆ ಹಾಗೂ ಬೂದಿ 50 ಮೀಟರ್ ಗಿಂತ ಹೆಚ್ಚಿನೆಡೆ ವ್ಯಾಪಿಸಿತ್ತು. ಇಲ್ಲಿ ಇನ್ನಷ್ಟು ಜ್ವಾಲಾಮುಖಿ ಸ್ಪೋಟ ನಡೆದರೆ ಈ ದ್ವೀಪದ ರಚನೆ ಬದಲಾಗುವ ಸಾಧ್ಯತೆ ಇದೆ’ ಎಂದಿದ್ದಾರೆ. ಸದ್ಯ, ಜ್ವಾಲಾಮುಖಿಯಿಂದ ರಚನೆಯಾದ ದ್ವೀಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.