fort; ವೀರವನತೆ ಓಬವ್ವಳ ಸಾಹಸಮಯ ಹೋರಾಟದ ಫಲವಾಗಿ ಚಿತ್ರದುರ್ಗ ಕೋಟೆ ಭದ್ರವಾಗಿ ಉಳಿದಿದೆ

ದಾವಣಗೆರೆ: ಇತಿಹಾಸದ ಪುಟಗಳಲ್ಲಿ ವೀರ ವನಿತೆ ಓಬವ್ವಳ ಹೆಸರು ಮರೆಯಲಾಗದೇ ಇರುವಂತದ್ದು, ಅವರ ಸಾಹಸಮಯ ಹೋರಾಟದ ಫಲವಾಗಿ ಚಿತ್ರದುರ್ಗದ ಕೋಟೆ ಭದ್ರವಾಗಿ ಉಳಿದಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ತಿಳಿಸಿದರು.

ಶನಿವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಛಲವಾದಿ ಮಹಾಸಭಾ(ರಿ) ಇವರ ಸಹಯೋಗದೊಂದಿಗೆ ಜರುಗಿದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂದು ಒನಕೆ ಓಬವ್ವ ಒನಕೆಯನ್ನು ಹಿಡಿದು ಶತ್ರುಗಳೊಂದಿಗೆ ಹೋರಾಟ ನಡೆಸಿದ್ದರಿಂದ ಸುಮಾರು 300 ವರ್ಷಗಳ ಚಿತ್ರದುರ್ಗದ ಕೋಟೆ ಭದ್ರವಾಗಿ ನಿಂತಿದೆ. ಓಬವ್ವಳ ಇಂತಹ ಸಾಹಸ ಕಾರ್ಯವನ್ನು ನಾವೆಲ್ಲ ಸ್ಮರಿಸಲೇಬೇಕು. ಒನಕೆ ಓಬವ್ವಳ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. ಅವರನ್ನು ಕರ್ನಾಟಕದ ವೀರ ವನಿತೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತ್  ಉಪಕಾರ್ಯದರ್ಶಿ ಕೃಷ್ಣ ನಾಯ್ಕ್ ಮಾತನಾಡಿ ಛಲವಾದಿ ಸಮುದಾಯದ ದಿಟ್ಟ ಮಹಿಳೆ, ಛಲವಾದಿ ವೀರವನಿತೆ ಒನಕೆ ಓಬವ್ವ ಎಂದರೆ ತಪ್ಪಾಗಲಾರದು. ಒನಕೆ ಓಬವ್ವ ಹಾಗೂ ಕಿತ್ತೂರಾಣಿ ಚೆನ್ನಮ್ಮ ನಮ್ಮ ಕನ್ನಡ ನಾಡಿನ ಎರಡು ಕಣ್ಮಣಿಗಳು ಇವರ ಹೋರಾಟ ಹಾಗೂ ದಿಟ್ಟ ಹೆಜ್ಜೆಗಳು ಎಲ್ಲರಿಗೂ ಮಾರ್ಗದರ್ಶನವಾಗಿದೆ.
ಜಿಲ್ಲೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಒನಕೆ ಓಬವ್ವ ಪ್ರತಿಮೆಗಳನ್ನು ಪ್ರತಿಷ್ಟಾಪಿಸಲಾಗುವುದು. ಈ ಮೂಲಕ ವೀರ ಹೋರಾಟಗಾರ್ತಿಯರ ಸಾಧನೆ, ಸಾಹಸವನ್ನು ಭವಿಷ್ಯದ ಪೀಳಿಗೆಗೂ ತಿಳಿಯುವಂತಾಗಬೇಕು ಎಂದರು.

ಜಯಂತಿಗಳನ್ನು ಆಚರಿಸುತ್ತೇವೆ, ಆದರೆ ಅವರು ಮಾಡಿದ ಸಾಧನೆ ಹೋರಾಟಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ಹಿಂದೆ ಉಳಿದಿದ್ದೇವೆ, ಇದನ್ನರಿತು ನಾವು ಜೀವನದಲ್ಲಿ ಮುಂದಿನ ಹೆಜ್ಜೆಗಳನ್ನಬೇಕು ಎಂದರು.
ತಂದೆ ತಾಯಿಯರು ಮಕ್ಕಳಿಗೆ ಇತಿಹಾಸದ ಪುಟಗಳನ್ನು ಪರಿಚಯಿಸಬೇಕು, ಓಬವ್ವ ಮಾಡಿದ ಸಾಧನೆಯನ್ನು ಮನವರಿಕೆ ಮಾಡಿಸಬೇಕು.

ಮಲೆಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಮಂಜುನಾಥ್.ಹೆಚ್ ಮಾತನಾಡಿ ಒನಕೆ ಓಬವ್ವ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯ ಛಲವಾದಿ ಕಹಳೆ ಚಿನ್ನಪ್ಪನ ಮಗಳು. ಚಿತ್ರದುರ್ಗದ ಕೋಟೆಯ ಕಾವಲುಗಾರನನ್ನು ವಿವಾಹವಾದಳು.
ಚಿತ್ರದುರ್ಗದಲ್ಲಿ ಹೈದರ್ ಅಲಿಯ ಪಡೆಗಳ ವಿರುದ್ಧ ಏಕಾಂಗಿಯಾಗಿ ಒನಕೆಯೊಂದಿಗೆ ಹೋರಾಡಿದ ಮಹಿಳೆ ಒನಕೆ ಓಬವ್ವ. ಮದಕರಿ ನಾಯಕನ ಆಳ್ವಿಕೆಯಲ್ಲಿ, ಚಿತ್ರದುರ್ಗ ನಗರವನ್ನು ಹೈದರ್ ಅಲಿ  ಪಡೆಗಳು ಮುತ್ತಿಗೆ ಹಾಕಿದವು. ತಣ್ಣೀರ ಚಿಲುಮೆಯಿಂದ ನೀರುತರಲು ಹೋದಾಗ ಶತ್ರು ಸೈನ್ಯವು ರಂಧ್ರದ ಮೂಲಕ ಕೋಟೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ಅವಳು ಗಮನಿಸಿದಳು. ಆಗ ಊಟ ಮಾಡುತ್ತಿದ್ದ ಪತಿಯನ್ನು ಕರೆಯಲು ಮನಸ್ಸಾಗದೇ, ಆಕೆಯೇ ಒನಕೆ ಹಿಡಿದು, ಕಿಂಡಿಯಿಂದ ನುಸುಳುತ್ತಿದ್ದ ಸೈನಿಕರನ್ನು ಒಬ್ಬೊಬ್ಬರ ತಲೆಗೆ ಬಡಿದು, ಸುಮಾರು 200 ಜನ ಶತ್ರುಗಳನ್ನು ಕೊಂದಳು.

ಊಟ ಮುಗಿಸಿ ಬಂದ, ಮದಕರಿ ನಾಯಕ ಇದನ್ನು ನೋಡಿ, ತನ್ನ ಸೈನ್ಯಕ್ಕೆ ಆದೇಶ ನೀಡಿದನು. ಈ ಹೋರಾಟದ ನಡುವೆ, ಆಕೆಗೆ ಶತ್ರು ಪಡೆಯ ಸೈನಿಕನೊಬ್ಬ ಹಿಂದಿನಿಂದ ಬಂದು, ಆಕೆಯನ್ನು ಚಾಕುವಿನಿಂದ ಇರಿದನು. ಇದಾದ ಬಳಿಕ ಆಕೆಗೆ ಚಿಕಿತ್ಸೆಯನ್ನು ನೀಡಿ ಬದುಕಿಸಿಕೊಳ್ಳಲಾಯಿತು. ಈ ಘಟನೆಯ ಬಳಿಕ ಒಂದು ವರ್ಷದ ನಂತರ ಒನಕೆ ಓಬವ್ವ ಸಾವನ್ನಪ್ಪಿದಳು.

ಸಾಮಾನ್ಯ ರಾಜ,ರಾಣಿ, ಸೈನಿಕರು ಯುದ್ಧ ಕೌಶಲ್ಯವನ್ನು ಕಲಿತು ಕರಗತ ಮಾಡಿಕೊಂಡು ಶತ್ರುಗಳ ವಿರುದ್ಧ ಹೋರಾಡುತ್ತಾರೆ. ಆದರೆ ಏನೂ ತಿಳಿಯದ ಸಾಮಾನ್ಯ ಗೃಹಿಣಿಯಾಗಿದ್ದ, ಯಾವುದೇ ಯುದ್ದ ಕೌಶಲ್ಯ ತಿಳಿಯದ, ಸಾಮಾನ್ಯ ಮಹಿಳೆ ವೈರಿಗಳಿಂದ ತನ್ನ ಕೋಟೆಯನ್ನು ರಕ್ಷಣೆ ಮಾಡಿದ ಒನಕೆ ಓಬವ್ವಳ ದಿಟ್ಟತನ ಎಲ್ಲರು ಮೆಚ್ಚೆಲೇ ಬೇಕು.  ಈ ಸಾಹಸಮಯ ಕಥೆಯನ್ನು ಪ್ರಸಿದ್ಧ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ತಮ್ಮ 1972 ರ ಕ್ಲಾಸಿಕ್ ಚಲನಚಿತ್ರ ನಾಗರಹಾವು ನಲ್ಲಿ ಹಾಡಿನ ಮೂಲಕ ಜನಪ್ರಿಯಗೊಳಿಸಿದರು ಎಂದರು.

ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿ ವಿಜಯಕುಮಾರ್ ಸಂತೋಷ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗಾಯಿತ್ರಿ ಹೆಚ್. ಕೆ, ಪರಿಶಿಷ್ಟ ಪಂಗಡದ ಅಧಿಕಾರಿ ಬೇಬಿ ಸುನಿತಾ, ಜಿಲ್ಲಾ ಛಲವಾದಿ ಮಹಾಸಭಾ(ರಿ) ಅಧ್ಯಕ್ಷ ರುದ್ರಮುನಿ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!