ದಾವಣಗೆರೆ: ಮತದಾನದ ವೇಳೆ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರು ನಿರ್ಭಯವಾಗಿ ಮತದಾನ ಮಾಡಲು ಎಲ್ಲಾ ಬಂದೋಬಸ್ತ್ ವ್ಯವಸ್ಥೆಯನ್ನು ಇಲಾಖೆಯಿಂದ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ: ಅರುಣ್.ಕೆ ತಿಳಿಸಿದರು.
23 ಜನರನ್ನು ಗಡಿಪಾರು ಮಾಡಲಾಗಿದ್ದು ಇದುವರೆಗೆ ನೀತಿ ಸಂಹಿತೆ ಉಲ್ಲಂಘನೆಯಡಿ 66 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 1685 ಮತಗಟ್ಟೆಗಳಿಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಸಿವಿಲ್ ಪೊಲೀಸ್, ಗೃಹರಕ್ಷಕ ದಳ ಸಿಬ್ಬಂದಿ, ಸಿಐಪಿಎಫ್ 20 ತಂಡದಲ್ಲಿನ 1262 ಸಿಬ್ಬಂದಿ, 7 ಕೆ.ಎಸ್.ಆರ್.ಪಿ.ತಂಡವನ್ನು ನಿಯೋಜಿಸಲಾಗಿದೆ. ಯಾವುದೇ ತರಹದ ಸಮಸ್ಯೆಗಳು ಬಂದಲ್ಲಿ 112 ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಲು ತಿಳಿಸಿದರು.
ಶೇ 85 ರಷ್ಟು ಮತದಾನದ ಗುರಿ; 2018 ರ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಶೇ 75.96 ರಷ್ಟು ಮತದಾನವಾಗಿತ್ತು. ಅದರಲ್ಲಿ ದಾವಣಗೆರೆ ಉತ್ತರ, ದಕ್ಷಿಣದಲ್ಲಿ 66, 65 ರಷ್ಟು ಮತದಾನವಾಗಿತ್ತು. ಈ ಭಾರಿ ಜಿಲ್ಲೆಯ ಸರಾಸರಿ ಶೇ 85 ಕ್ಕಿಂತ ಹೆಚ್ಚಿಸಬೇಕೆಂಬ ಗುರಿಯನ್ನು ಹೊಂದಿ ಅನೇಕ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಇಟ್ನಾಳ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಉಪಸ್ಥಿತರಿದ್ದರು.
