ಜೆಡಿಎಸ್‌ನ 2ನೇ ಪಟ್ಟಿ ರೆಡಿ ಇದೆ: ಒಂದೆರೆಡು ದಿನಗಳಲ್ಲಿ ಬಿಡುಗಡೆ ಮಾಡುವೆ: ಕುಮಾರ ಸ್ವಾಮಿ
ಕೋಲಾರ : ಒಂದೆರಡು ದಿನಗಳಲ್ಲಿ ಜೆಡಿಎಸ್‌ನ 2ನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸೋಮವಾರ ಮುಳಬಾಗಿಲು ತಾಲ್ಲೂಕಿನ ಶಿನಗೇನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಸಿದ್ಧ ಮಾಡಿಟ್ಟಿದ್ದೇನೆ. ನಾನು ಬಳ್ಳಾರಿಗೆ ತೆರಳುತ್ತಿದ್ದು, ಮೂರು ದಿನ ಬೆಂಗಳೂರಿನಲ್ಲಿ ಇರುವುದಿಲ್ಲ. ಬಂದ ಕೂಡಲೇ ಬಿಡುಗಡೆ ಮಾಡುತ್ತೇನೆ ಎಂದರು.
ಹಾಸನ ಕ್ಷೇತ್ರದ ಅಭ್ಯರ್ಥಿಯೂ ಅಂತಿಮವಾಗಿದೆ. ನಮ್ಮ ಪಂಚರತ್ನ ರಥಯಾತ್ರೆ ಯಶಸ್ಸು ಎದುರಾಳಿಗಳಲ್ಲಿ ನಡುಕ ಉಂಟು ಮಾಡಿದೆ ಎಂದರು.
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಎದುರಿನ ಜೆಡಿಎಸ್ ಅಭ್ಯರ್ಥಿ ಕುರಿತು, ‘ಅಭಿಷೇಕ್ ಎಂಬ ಅಭ್ಯರ್ಥಿ ನಿಲ್ಲಿಸಿದ್ದೆವು. ಕಳೆದ ಬಾರಿಯೂ ಟಿಕೆಟ್ ನೀಡಿದ್ದೆವು. ಈ ಬಾರಿ ಅವರು ಹಿಂದೆ ಸರಿದಿದ್ದಾರೆ ಎಂಬ ಮಾಹಿತಿ ಬಂದಿದೆ. ಇನ್ನೂ ಅವರನ್ನು ಸಂಪರ್ಕಿಸಿಲ್ಲ. ಸ್ಪರ್ಧೆ ಮಾಡಲ್ಲವೆಂದರೆ ಬೇರೆ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ ಎಂದು ಹೇಳಿದರು.
ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಕುಮಾರಸ್ವಾಮಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಹೆಲಿಕಾಪ್ಟರ್ ತಪಾಸಣೆ ಮಾಡಿದರು.
ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಕಾರ್ಯಕರ್ತರು ಕುಮಾರಸ್ವಾಮಿ ಅವರಿಗೆ ಎರಡು ಕುರಿ, ಕಂಬಳಿ ಹಾಗೂ ಬೆಳ್ಳಿ ಗದೆಯನ್ನು ಉಡುಗೊರೆಯಾಗಿ ನೀಡಿದರು.