ಮೂವತ್ತು ವರ್ಷಗಳ ಬಳಿಕ 32 ಗುಂಟೆ ಜಮೀನು ವಿವಾದ ಇತ್ಯರ್ಥ

ಚಿತ್ರದುರ್ಗ(ಬ್ಯುರೊ): ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದಲ್ಲಿ ಒಂದು ವಿಶೇಷ ಪ್ರಕರಣ ಇತ್ಯರ್ಥಗೊಂಡಿದೆ. ಕೇವಲ 32 ಗುಂಟೆ ಜಮೀನು ವಿವಾದ ಮೂವತ್ತು ವರ್ಷದ ಬಳಿಕ ಇತ್ಯರ್ಥವಾಗಿ ಇಳಿ ವಯಸ್ಸಿಯಲ್ಲಿ ವೃದ್ದರೊಬ್ಬರ ಖುಷಿಗೆ ಕಾರಣ ಆಗಿದೆ.
ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ ಇಂತಹ ಅಪರೂಪದ ಘಟನೆಗೆ ಸಾಕ್ಷಿ ಆಯಿತು. ತಾಲ್ಲೂಕಿನ ಹಿರೇಗುಂಟನೂರು ಹೋಬಳಿ ಹುಲ್ಲೂರು ಗ್ರಾಮದ ಕೆ.ಎನ್.ಕಲ್ಲೇಶಪ್ಪ ತಮ್ಮ ಹೆಸರಿನಲ್ಲಿದ್ದ 4 ಎಕರೆ 32 ಗುಂಟೆ ಜಮೀನನ್ನು 1994 ರಲ್ಲಿ ಮಾರಾಟ ಮಾಡಿದ್ದರು. ಮಾರಾಟ ಮಾಡಿದ ಬಳಿಕ 32 ಗುಂಟೆ ಜಮೀನಿನಲ್ಲಿ ಬೇಸಾಯ ಮಾಡಿ ಜೀವನ ನಡೆಸಲು ಮುಂದಾದರು. ಆದರೆ 32 ಗುಂಟೆ ಜಮೀನು ಎಲ್ಲಿದೆ ಎನ್ನುವುದೇ ಗೊತ್ತಾಗಲಿಲ್ಲ.
ಮಾರಾಟ ಮಾಡಿದ್ದು ೪ ಎಕರೆ ಉಳಿದ 32 ಗುಂಟೆ ಎಲ್ಲಿದೆ ಎನ್ನುವುದೇ ಗೊತ್ತಾಗಲಿಲ್ಲ. ಮಾರಾಟ ಮಾಡಿದವರಿಗೆ ಕೇಳಿದರೆ ನಾಲ್ಕು ಎಕರೆ ಮಾತ್ರ ಇದೆ ಎಂದು ತೋರಿಸಿದರು. ಈ ಬಗ್ಗೆ ಕಲ್ಲೇಶಪ್ಪ ನ್ಯಾಯಾಲಯದ ಮೆಟ್ಟಿಲು ಏರಿದರು. ಪ್ರತಿವಾದಿಗಳು ನ್ಯಾಯಾಲಯಕ್ಕೆ ಬಾರದ ಹಿನ್ನೆಲೆಯಲ್ಲಿ ಡಿಕ್ರಿ ಆಗಿತ್ತು.
ಸುಮಾರು ವರ್ಷದಿಂದ ಬಗೆಹರಿಯದ ಈ ವಿವಾದದ ಬಗ್ಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರೇಮಾವತಿ ಮನಗೂಳಿ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯಕುಮಾರ್ ಅವರು ಎರಡು ಕಡೆಯವರನ್ನು ಬರಮಾಡಿಕೊಂಡರು. ಕಲ್ಲೇಶಪ್ಪ ಅವರು ನಾನು ಮಾರಾಟ ಮಾಡಿದ್ದು ನಾಲ್ಕು ಎಕರೆ ಉಳಿದ 32 ಗುಂಟೆ ಜಮೀನು ಇಲ್ಲ ಎಂದರು. ಇದಕ್ಕೆ ಪ್ರತಿವಾದಿ ನಾವು ಖರೀದಿ ಮಾಡಿದ್ದು ನಾಲ್ಕು ಎಕರೆ ಎಂದು ಒಪ್ಪಿಕೊಂಡರು.
ತಕ್ಷಣ ಎರಡು ಕಡೆ ವಕೀಲರನ್ನು ಬರಮಾಡಿಕೊಂಡು ದಾಖಲೆಗಳನ್ನು ಪಡೆದು ಪರಿಶೀಲಿಸಲಾಯಿತು. ಭೂ ದಾಖಲೆಗಳ ಇಲಾಖೆಯ ಸರ್ವೇಯರ್‌ನ್ನು ಕಳುಹಿಸಿ ಸರ್ವೆ ಮಾಡಿಸಲಾಯಿತು. ನಾಲ್ಕು ಎಕರೆ ಜಮೀನು ಖರೀದಿ ಮಾಡಿದವರೆ 32 ಗುಂಟೆ ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದಿತ್ತು. ಇಬ್ಬರನ್ನು ನ್ಯಾಯಾಲಯದಲ್ಲಿ ಕುರಿಸಿಕೊಂಡು ಮನವೊಲಿಸಲಾಯಿತು. ಅಂತಿಮವಾಗಿ ಜಮೀನು ಖರೀದಿ ಮಾಡಿದ ಮಹಿಳೆ 32 ಗುಂಟೆ ಜಮೀನು ಬಿಟ್ಟು ಕೊಡಲು ಒಪ್ಪಿಕೊಂಡರು. ಕೊನೆಗೆ 32 ಗುಂಟೆ ಜಮೀನು ವಿವಾದ 3೦ ವರ್ಷದ ಬಳಿಕ ಇತ್ಯರ್ಥವಾಯಿತು.