340 ಬೋಧಕರ ಹುದ್ದೆ ನೇಮಕಾತಿ ಮಾಡಲು ರಾಜ್ಯಸರ್ಕಾರ ಅನುಮತಿ
ಬೆಂಗಳೂರು: ಖಾಸಗಿ, ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅಂತಿಮ ಹಂತದಲ್ಲಿ ಬಾಕಿ ಇರುವ 340 ಬೋಧಕರ ಹುದ್ದೆ ನೇಮಕಾತಿ ಮಾಡಲು ರಾಜ್ಯಸರ್ಕಾರ ಅನುಮತಿ ನೀಡಿದೆ.
ಖಾಸಗಿ, ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ನೇಮಕಾತಿ ಅನುಮೋದನೆಗೆ ಅಂತಿಮ ಹಂತದಲ್ಲಿ ಬಾಕಿ ಇರುವ 340 ಹುದ್ದೆಗಳಿಗೆ ನೇಮಕಾತಿ ಅನುಮೋದನೆ ನೀಡಲು ಆರ್ಥಿಕ ಇಲಾಖೆಯು ಸಹಮತಿಸಿದ್ದು, ಅದರಂತೆ ಆಯುಕ್ತಾಲಯದಿಂದ ಸ್ವೀಕೃತವಾದ ಕಾಲೇಜುವಾರು ಪ್ರಸ್ತಾವನೆಗಳಿಗೆ 2021-22ನೇ ಶೈಕ್ಷಣಿಕ ವರ್ಷ ಪ್ರಾರಂಭಗೊಂಡ ನಂತರ ಜೂನ್ ಅಥವಾ ಜುಲೈ 2021 ರಲ್ಲಿ ನೇಮಕಾತಿ ಆದೇಶ ನೀಡಲು ನಿರ್ದೇಶನ ನೀಡಲಾಗಿತ್ತು.
ಪ್ರಸ್ತುತ, ವಿವಿಧ ವಿಶ್ವವಿದ್ಯಾಲಯಗಳು ಹೊರಡಿಸಿರುವ ಸುತ್ತೋಲೆ / ಅಧಿಸೂಚನೆಗಳಲ್ಲಿ 2021-22ನೇ ಶೈಕ್ಷಣಿಕ ವರ್ಷವು ಆಗಸ್ಟ್ 2021 ರಿಂದ ನವೆಂಬರ್ 2021 ರಲ್ಲಿ ಪ್ರಾರಂಭವಾಗುವುದಾಗಿ ತಿಳಿಸಲಾಗಿತ್ತು. ಆದರೆ, ಕೋವಿಡ್ ಹಿನ್ನಲೆಯಲ್ಲಿ 2020-21ನೇ ಶೈಕ್ಷಣಿಕ ವರ್ಷವು ಮುಂದುವರೆದಿರುವುದರಿಂದ, ಪ್ರಸ್ತುತ ಜೂನ್, ಜುಲೈ ರಲ್ಲಿ ಎರಡನೇ, ನಾಲ್ಕನೇ ಮತ್ತು ಆರನೇ ಸೆಮಿಸ್ಟರ್‌ನ ತರಗತಿಗಳನ್ನು ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಆನ್ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ.
ಆದ್ದರಿಂದ, ಆರ್ಥಿಕ ಇಲಾಖೆಯು ಈಗಾಗಲೇ ನೀಡಿರುವ ಸಹಮತಿಯಂತೆ ಪ್ರಸ್ತುತ ಜೂನ್ , ಜುಲೈ ನಲ್ಲಿ ನೇಮಕಾತಿ ಆದೇಶ ನೀಡಲು ಸರ್ಕಾರದ ಅನುಮತಿ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ) ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಹರ್ಷ ತಿಳಿಸಿದ್ದಾರೆ.