40 ಪರ್ಸೆಂಟೇಜ್ ಸರ್ಕಾರ ಎಂಬ ದೂರು ಬಾರದಂತೆ ಪಾರದರ್ಶಕ ಕೆಲಸ ಮಾಡಲು ಸಿಎಂ ಬೊಮ್ಮಾಯಿ ಖಡಕ್ ಸೂಚನೆ

ಬೆಂಗಳೂರು: ರಸ್ತೆಗಳ ತುಂಬೆಲ್ಲಾ ಗುಂಡಿಗಳು ಬಿದ್ದಿದ್ದು, ಮಳೆಬಂದರೆ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅಲ್ಲದೇ, ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ, ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಮಾರ್ಚ್ ವರೆಗು ಗಡುವು ನೀಡಿದ್ದಾರೆ.
ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಬೆಂಗಳೂರಿನಲ್ಲಿ ಸಭೆ ನಡೆಸಿ ಮಾತನಾಡಿದರು.
ಮಾರ್ಚ್ ಒಳಗೆ ರಸ್ತೆ ಗುಂಡಿಗಳನ್ನ ಮುಚ್ಚಿ. ತುಂಬಾ ಕಳಪೆಯಾಗಿವೆ ಅನ್ನೋ ಆರೋಪಗಳು ಹೆಚ್ಚಾಗುತ್ತಿವೆ. ವಿಪಕ್ಷದವರು ೪೦ ಪರ್ಸೆಂಟ್ ಅಂತೆಲ್ಲ ದೂರುಗಳನ್ನು ಮಾಡುತ್ತಿದ್ದಾರೆ. ಇದೆಲ್ಲ ಆಗಬಾರದ. ಆದಷ್ಟು ಬೇಗ ಗುಂಡಿಗಳನ್ನ ಮುಚ್ಚಿಸುವಂತೆ ಸಭೆಯಲ್ಲಿ ಸಿಎಂ ತಾಕೀತು ಮಾಡಿದರು.
ಬೆಂಗಳೂರಿನಲ್ಲಿ ಒತ್ತುವರಿದಾರರ ಹಾವಳಿ ಹೆಚ್ಚಾಗಿದ್ದು, ಇದರ ಬಗ್ಗೆ ಹೆಚ್ಚು ಗಮನಹರಿಸಿ, ರಾಜಕಾಲುವೆ ಒತ್ತುವರಿದಾರರಿಗೆ ಬಿಸಿಮುಟ್ಟಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಹಾನಿಯಿಂದಾಗಿ ಆದ ಅನಾಹುತಗಳ ಬಗ್ಗೆ ಪ್ರಸ್ತಾಪ ಮಾಡಿ ಸಿಎಂ, ಮಳೆ ಬಂದ್ರೆ ಸಾಕಷ್ಟು ಸಮಸ್ಯೆಗಳಾಗುತ್ತವೆ. ನೀರು ಸರಾಗವಾಗಿ ಹೋಗುವಂತೆ ಹೋಗಲು ರಾಜಕಾಲುವೆ ಒತ್ತುವರಿ ಬಗ್ಗೆ ಗಮನಹರಿಸಿ. ಕಾಲುವೆಗಳಲ್ಲಿ ಹೂಳೆತ್ತುವ ಕಾರ್ಯ ನಡೆಯಬೇಕು ಎಂದು ತಿಳಿಸಿದರು.
ಸಧ್ಯ ಕೊರೊನಾ ಮೂರನೇ ಅಲೆಯ ಆತಂಕವಿದ್ದು, ಈ ಬಗ್ಗೆ ಸಾಕಷ್ಟು ಎಚ್ಚರವಹಿಸಿ. ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಜನರ ಜೊತೆ ಇದ್ದು ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಿ. ಪಕ್ಷಾತೀತವಾಗಿ ನಮ್ಮ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದವಿದೆ ಎಂದು ಹೇಳಿದರು.

 
                         
                       
                       
                       
                       
                      