86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಜ್ಯದ ವಿಶ್ವ ವಿದ್ಯಾಲಯಗಳ ಪಠ್ಯಕ್ರಮಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ವಿಷಯ ಸೇರ್ಪಡೆಯಾಗಲಿ -ಕೆ.ಸತ್ಯನಾರಾಯಣ
ಹಾವೇರಿ (ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆ):
ಉತ್ತರ ಭಾರತದ ವಿವಿ. ಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಅಧ್ಯಯನಕ್ಕೆ ಅಳವಡಿಸಿರುವ ವಿಷಯದಂತೆ ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯ ಅಳವಡಿಕೆಯಾಗಬೇಕು ಎಂದು ಕೇಂದ್ರ ಸರ್ಕಾರದ ವರಮಾನ ತೆರಿಗೆ ಇಲಾಖೆ ನಿವೃತ್ತ ಪ್ರಧಾನ ಮುಖ್ಯ ಆಯುಕ್ತ ಕೆ.ಸತ್ಯನಾರಾಯಣ ಅವರು ಹೇಳಿದರು.
ಶನಿವಾರ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಹಿತ್ಯ ಸಮ್ಮೇಳನದ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆಯಲ್ಲಿ ಜರುಗಿದ “ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ” ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ತರ ಭಾರತದ ವಿವಿ ಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ವಿಷಯಗಳನ್ನು ಅಭ್ಯಯಿಸುವುದರಿಂದ ಅಲ್ಲಿನ ಅಭ್ಯರ್ಥಿಗಳು ಹೆಚ್ಚಾಗಿ ಯು.ಪಿ.ಎಸ್ಸಿ. ಪರೀಕ್ಷೆಯಲ್ಲಿ ಆಯ್ಕೆಯಾಗುತ್ತಿದ್ದಾರೆ. ಅದರಂತೆ ರಾಜ್ಯದಲ್ಲೂ ಸ್ಪರ್ಧಾತ್ಮಕ ವಿಯಷಗಳ ಸೇರ್ಪಡೆಗೆ ಸರ್ಕಾರ ಮುಂದಾಗಬೇಕು ಎಂದು ಹೇಳಿದರು.
ಕನ್ನಡ ಐಚ್ಛಿಕ ವಿಷಯದಲ್ಲಿ ಪರೀಕ್ಷೆ ತೆಗೆದುಕೊಂಡರೆ ನಾವುಗಳು ಇತರ ಪ್ರಾದೇಶಿಕ ಭಾಷೆಗಳ ಅಭ್ಯರ್ಥಿಗಳಿಗೆ ಸ್ಪರ್ಧಿಗಳಾಗುತ್ತೇವೆ. ಕನ್ನಡ ಐಚ್ಛಿಕ ವಿಷಯಗಳು ಸುಲಭ ಎಂಬುದು ತಪ್ಪು ಕಲ್ಪನೆ, ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಎಲ್ಲ ವಲಯಗಳ ಆಳಜ್ಞಾನ ಅರಿತವರು ಮಾತ್ರ ಆಯ್ಕೆಯಾಗಬಲ್ಲರು. ಪರೀಕ್ಷೆಯಲ್ಲಿ ಆಯ್ಕೆ ಬಯಸುವ ಅಭ್ಯರ್ಥಿಗಳು ಸಾಹಿತ್ಯ ಸಂಸ್ಕøತಿಯ ಜೊತೆ ಜೊತೆಗೆ ಇತಿಹಾಸ, ಪ್ರಸ್ತುತ ವಿದ್ಯಮಾನಗಳ ಸಾಮಾನ್ಯ ಜ್ಞಾನ ಇರಬೇಕು ಎಂದರು.
ಉನ್ನತ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಐಚ್ಛಿಕ ಕನ್ನಡ ಹಾಗೂ ಶೈಕ್ಷಣಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಕುರಿತು ಮಹಮ್ಮದ ರಫಿ ಪಾಶಾ ಮಾತನಾಡಿ, ಶೈಕ್ಷಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರು ಮುಂದೆ ಅಗಾದ ಸಾಧನೆ ಮಾಡಲು ಸಾಧ್ಯ. ಇಚ್ಚಾಶಕ್ತಿ ಪ್ರಬಲವಾಗಿರಬೇಕು, ಯಾವುದೇ ತೊಂದರೆಗಳಿಗೆ ಎದೆಗುಂದದೆ ಮುನ್ನುಗ್ಗುವ ಎದೆಗಾರಿಕೆ ಅಳವಡಿಸಿಕೊಂಡು ಸಾಗಬೇಕು ಎಂದರು.
ಪರೀಕ್ಷೆಗೆ ಸಿದ್ಧತೆಗೊಳ್ಳುವವರು ಎಚ್ಚರವಾಗಿ ಹಾಗೂ ಜಾಗೃತರಾಗಿ ಸಿದ್ಧತೆಮಾಡಿಕೊಳ್ಳಬೇಕು. ದುರ್ಬಲರು ಅವಕಾಶಗಳಿಗಾಗಿ ಕಾಯುತ್ತಾರೆ, ಪ್ರಬಲರು ಅವಕಾಶಗಳನ್ನು ಸೃಷ್ಟಿಸುತ್ತಾರೆ. 1986ರಲ್ಲಿ ಕೆಪಿಎಸ್ಸಿ ಪರೀಕ್ಷೆಯಲ್ಲಿ ಕಡ್ಡಾಯ ಕನ್ನಡ ಪತ್ರಿಕೆ ಜಾರಿಗೆ ತಂದಿದೆ. ನಂತರ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಡ್ಡಾಯಗೊಳಿಸಲಾಯಿತು. 1980ರಲ್ಲಿ ಕೆ.ಶಿವರಾಂ ಅವರು ಕನ್ನಡದಲ್ಲಿ ಯುಪಿಎಸ್ಸಿ ಎದುರಿಸುವ ಮೂಲಕ ಆಯ್ಕೆಯಾದುದು ನಿಮ್ಮಲ್ಲರಿಗೂ ತಿಳಿಸಿದ ವಿಷಯ ಎಂದರು.
ಐಬಿಪಿಎಸ್, ಬ್ಯಾಂಕಿಂಗ್ ಪರೀಕ್ಷೆಗಳು ಕನ್ನಡದಲ್ಲಿ ಆಗಬೇಕು. ಇದರಿಂದ ಹೆಚ್ಚು ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಂತೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗೆ ಅವಕಾಶ ದೊರೆಯಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆ ಕುರಿತು ಡಾ.ಪ್ರಕಾಶ್ ಜೆ.ಪಿ ಅವರು ಮಾತನಾಡಿ, ಕಲಿಕೆ ಗಳಿಕೆಗೆ ಸೀಮಿತಮಾಡದೆ ಅದನ್ನು ಅಪರಮಿತವಾಗಿಸಬೇಕು. ಯುಪಿಎಸ್ಸಿ ಪರೀಕ್ಷೆಯಲ್ಲಿ ಒಟ್ಟು ನಾಲ್ಕು ಪತ್ರಿಕೆಗಳಿರುತ್ತವೆ. ಪ್ರತಿ ವರ್ಷ ಪರೀಕ್ಷೆಗೆ ಆಯ್ಕೆ ಬಯಸಿ ಪರೀಕ್ಷೆ ತೆಗೆದುಕೊಳ್ಳುವರ ಸಂಖ್ಯೆ 10 ಲಕ್ಷ, ಈ ಪೈಕಿ ಐ.ಎ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರ ಸಂಖ್ಯೆ 150 ರಿಂದ 200 ಮಾತ್ರ. ಒಟ್ಟಾರೆ ಯುಪಿಎಸ್ಸಿಯಿಂದ 900 ಅಧಿಕಾರಿಗಳು ಮಾತ್ರ ಆಯ್ಕೆಯಾಗುತ್ತಾರೆ. ಆಯ್ಕೆಯಾದವರು ಶೇ.50 ಕ್ಕಿಂತ ಕಡಿಮೆ ಅಂಕ ಪಡೆದು ಆಯ್ಕೆಯಾಗುತ್ತಿರುವುದು ವಿಶೇಷ. 2017 ರಲ್ಲಿ ಕೆಎಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆದಿದ್ದು 650 ಜನ, ಇದರಲ್ಲಿ ಆಯ್ಕೆಯಾದವರು ಕೇವಲ 10 ಜನ ಮಾತ್ರ ಎಂದರು.
ಗ್ರಾಮೀಣಭಾಗದ ವಿದ್ಯಾರ್ಥಿಗಳಲ್ಲಿ ಹಿಂಜರಿಕೆ ಸ್ವಭಾವ ಹೆಚ್ಚಾಗಿದೆ. ಕನ್ನಡದ ಕುರಿತು ಕೀಳರಿಮೆ, ಅರಿವಿನ ಕೊರತೆ ದೂರವಾಗಬೇಕು ಎಂದ ಅವರು, ನಡೆಯುವವರು ಎಡವದೆ, ಕುಳಿತವರು ಎಡವಲು ಸಾಧ್ಯವೇ? ಎಂಬುದನ್ನು ಅರಿಯಬೇಕು. ಮೊದಲು ನಾವು ಪರೀಕ್ಷೆ ಎದುರಿಸವ ಅಚಲ ಮನೋಭಾವದಿಂದ ಮುನ್ನುಗ್ಗಬೇಕು ಎಂದರು.
ಅಕ್ಷರ ಕಲಿತವ ಭಷ್ಟನಾಗಬಲ್ಲ, ಸಂಸ್ಕಾರ ಕಲಿತವ ಎಂದಿಗೂ ಭ್ರಷ್ಟನಾಗಲಾರ ಎಂಬ ಸಿದ್ದೇಶ್ವರ ಶ್ರೀಗಳ ವಾಣಿಯಂತೆ ಉತ್ತಮ ಸಂಸ್ಕಾರವನ್ನು ಹೊಂದಬೇಕು. ಯುಪಿಎಸ್ಸಿ ನಾಲ್ಕನೇ ಪತ್ರಿಕೆಯಲ್ಲಿ ನೀತಿ ಶಾಸ್ತ್ರ ಹಾಗೂ ಪ್ರಾಮಾಣಿಕತೆ ವಿಷಯ ಕುರಿತು ಪರೀಕ್ಷೆ ಎದುರಿಸುವ ಅಭ್ಯರ್ಥಿಗಳೆಲ್ಲರೂ ಆಯ್ಕೆಯ ನಂತರ ಗಳಿಕೆಗೆ ಸೀಮಿತವಾಗದೆ ಹೃದಯವಂತಿಕೆಯಿಂದ ಸೇವೆ ಸಲ್ಲಿಸಬೇಕು. ನ್ಯಾಯ, ನೀತಿ, ಧರ್ಮ, ಪ್ರಾಮಾಣಿಕತೆ ಬೋಧನೆಯಾದೆ ಕೃತಿಯಾಗಬೇಕು ಎಂದರು.
ಸಿ.ಎಸ್.ಮರಳಿಹಳ್ಳಿ ನಿರೂಪಿಸಿದರು, ಆದಪ್ಪ ಹೆಂಬಾ ನಿರ್ವಹಣೆಮಾಡಿದರು. ಎಂ.ಖಾಶಿಂ ಮಲ್ಲಿಗೆ ಮಡವು ಅವರು ಸ್ವಾಗತಿಸಿ ವಂದಿಸಿದರು.