ಚನ್ನಗಿರಿ ಬಳಿ ಕಾರು ಅಡ್ಡಗಟ್ಟಿ ಪಿಸ್ತೂಲು ತೋರಿಸಿ 95 ಲಕ್ಷ ಹಣ ಲೂಟಿ

ಚನ್ನಗಿರಿ ಬಳಿ ಕಾರು ಅಡ್ಡಗಟ್ಟಿ ಪಿಸ್ತೂಲು ತೋರಿಸಿ 95 ಲಕ್ಷ ಹಣ ಲೂಟಿ

ಚನ್ನಗಿರಿ: ಕಾರು ತಡೆದು ಪಿಸ್ತೂಲು ತೋರಿಸಿದ ಡಕಾಯಿತರು ಬರೋಬ್ಬರಿ 95 ಲಕ್ಷ ಹಣ ದರೋಡೆ ಮಾಡಿರುವ ಘಟನೆ ಬೀರೂರು–ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿನ ಬುಕ್ಕಾಂಬುದಿ ಕೆರೆ ಬಳಿ ನಡೆದಿದೆ.

ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು,  15 ರಿಂದ 16 ಜನ ಇದ್ದ ತಂಡ ಹಣವನ್ನ ದೋಚಿಕೊಂಡು ಪರಾರಿಯಾಗಿದೆ. ಕಾರಿನಲ್ಲಿದ್ದವರನ್ನು ವಿವಿಧ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಜೂನ್‌ 18ರ ಬೆಳಗ್ಗೆ 10ರ ಸುಮಾರಿಗೆ ದರೋಡೆ ನಡೆದಿರುವುದಾಗಿ  ಆರೋಪಿಸಿ ದುಬೈನಲ್ಲಿ ತೈಲ ವ್ಯಾಪಾರ ಮಾಡುತ್ತಿರುವ ನಬೀಲ್ಕೆ ಎಂಬ ವ್ಯಕ್ತಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

‘ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಸಾನೆ ಗುರೂಜಿ ಪಟ್ಟಣದಲ್ಲಿ ಇವರ ಚಿನ್ನಾಭರಣದ ಅಂಗಡಿ ಇದ್ದು,  ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ವಾಸವಿರುವ ಸ್ವ ಕುಟುಂಬ ಊರಿನಲ್ಲೇ ಚಿನ್ನಾಭರಣ ಅಂಗಡಿ ತೆರೆಯಬೇಕು ಎಂಬ ಉದ್ದೇಶದಿಂದ ಸಾನೆ ಗುರೂಜಿಯ ಅಂಗಡಿಯಲ್ಲಿದ್ದ  ಆಭರಣಗಳನ್ನ ಮಾರಿ, ಅಲ್ಲಿಂದ ₹ 95 ಲಕ್ಷ ಹಣವನ್ನ ತೆಗೆದುಕೊಂಡು ಬರುವಾಗ ದರೋಡೆ ನಡೆದಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೀಲೇಶ್‌ ಹಾಗೂ ಅಭಿಜಿತ್ ಈ ಹಣದೊಂದಿಗೆ ಕಾರಿನಲ್ಲಿ ವಿರಾಜಪೇಟೆಗೆ ಹೋಗುವ ಮಾರ್ಗ ಮಧ್ಯೆ 10 ರಿಂದ 15 ಜನರು ಇದ್ದ ದರೋಡೆಕೋರರ ತಂಡ ಬುಕ್ಕಾಂಬುದಿ ಕೆರೆ ಬಳಿ ಕಾರು ಅಡ್ಡಗಟ್ಟಿತ್ತು. ಪಿಸ್ತೂಲ್ ತೋರಿಸಿ ಹಣ ದೋಚಿ ಪರಾರಿಯಾಗಿದ್ದಾರೆ, ನೀಲೇಶ್‌ ಎಂಬುವವರನ್ನ ಬೆಂಗಳೂರಿನ ಬಳಿ, ಅಭಿಜಿತ್‌ ರನ್ನು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬಳಿ ಬಿಟ್ಟು ದರೋಡೆಕೊರರು ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.

‘ಪ್ರಕರಣದ ಬಗ್ಗೆ ದೂರು ಸಲ್ಲಿಸಲು ದುಬೈ ನಿಂದ ಬರಲು  ವಿಮಾನದ ಟಿಕೆಟ್‌ ದೊರೆಯದ ಹಿನ್ನೆಲೆ ದೂರು ನೀಡಲು ತಡವಾಗಿ ಬಂದು ದೂರು ನೀಡುತ್ತಿದ್ದೇನೆ’ ಎಂದು ತಿಳಿಸಿದ್ದಾರೆ. ‘ಘಟನೆ ನಡೆದಿರುವ ಬುಕ್ಕಾಂಬುದಿ ಕೆರೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕು ವ್ಯಾಪ್ತಿಗೆ ಒಳಪಡುವುದರಿಂದ ಪ್ರಕರಣವನ್ನು ಅಜ್ಜಂಪುರ ಠಾಣೆಗೆ ವರ್ಗಾಯಿಸಲಾಗಿದೆ’ ಎಂದು ಚನ್ನಗಿರಿ ಠಾಣೆಯ ಪೊಲಿಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!