ಬಾಂಬೆ – ಚೆನ್ನೈ ಕಾರಿಡಾರ್ ಯೋಜನೆ: ಹರಿಹರದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ನಮ್ಮ ಸರ್ಕಾರದ ಆದ್ಯತೆ : ಸಿ.ಎಂ

ದಾವಣಗೆರೆ: ಬಾಂಬೆ – ಚನ್ನೈ ಕಾರಿಡಾರ್ ಯೋಜನೆಗೆ ಹರಿಹರ ನಗರವೂ ಒಳಪಡಲಿದ್ದು, ಹರಿಹರದಲ್ಲಿ ಕೈಗಾರಿಕೆಗಳ ಅಭಿವೃದ್ದಿ ಹಾಗೂ ಹರಿಹರ ದಾವಣಗೆರೆ ನಗರಗಳಲ್ಲಿ ಉದ್ಯೋಗವಕಾಶಗಳ ಹೆಚ್ಚಳಕ್ಕೆ ನಮ್ಮ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು
ಹರಿಹರದ ತುಂಗಭದ್ರಾ ನದಿಯ ತಟದಲ್ಲಿ ಸುಮಾರು 30 ಕೋಟಿ ರೂ ವೆಚ್ವದಲ್ಲಿ ತುಂಗಾರತಿ ಯೋಗಮಂಟಪದ ಶಂಕುಸ್ಥಾಪನೆ ನೆರವೇರಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಬದುಕಿನ ಮೂಲವಾದ ಜಲಮೂಲದ ರಕ್ಷಣೆ, ಸ್ವಚ್ಛತೆ ಇಂದು ನಡೆದಿದೆ. ನಮ್ಮ ಎಲ್ಲಾ ನಾಗರಿಕತೆಗಳು ನದಿತಟದಲ್ಲಿಯೇ ಬೆಳೆದಿವೆ ಎಂದರು.
ನಮ್ಮ ನಾಗರೀಕತೆ ಬೆಳೆದದ್ದು ನದಿ ತಟಗಳಲ್ಲಿ, ಅದರೊಂದಿಗೆ ಸಂಸ್ಕøತಿಯೂ ಬೆಳೆಯಬೇಕಾಗಿದೆ,ನಮ್ಮಲ್ಲಿ ಏನಿದೆಯೋ ಅದು ನಾಗರಿಕತೆ. ಚಕ್ಕಡಿ, ಮೋಟರ್ ಸೈಕಲ್, ಕಾರು, ಬೀಸೋಕಲ್ಲು ಹೋಗಿ ಮಿಕ್ಸಿ ಬಂದಿದೆ. ಅದು ನಾಗರಿಕತೆ. ಅದು ಸಂಸ್ಕೃತಿ ಅಲ್ಲ. ನಾಗರಿಕತೆ ಬೆಳೆಯಬೇಕು. ಸೌಲತ್ತು ಬೆಳೆಯಬೇಕು. ನಾವೇನು ಆಗಿದ್ದೇವೆಯೋ ಅದು ಸಂಸ್ಕೃತಿ. ಮಾನವೀಯ ಗುಣಗಳು, ಉದಾರತೆಯ ಗುಣಗಳು ಸಹಿತ ಎಲ್ಲ ಗುಣಗಳು ಸಂಸ್ಕೃತಿ ಆಗಿವೆ.
ನದಿತಟದಲ್ಲಿ ಸಂಸ್ಕೃತಿ ಮತ್ತು ನಾಗರಿಕತೆ ಬೆಳೆಸಬೇಕು ಎಂದು ತುಂಗಾರತಿ ಕಾರ್ಯಕ್ರಮವನ್ನು ವಚನಾನಂದ ಸ್ವಾಮೀಜಿ ಹಮ್ಮಿಕೊಂಡಿದ್ದಾರೆ. ಕಾಶಿಯ ರೀತಿ ಇಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು.
ನನ್ನ ಪ್ರಕಾರ ವಿಜ್ಞಾನ ಮತ್ತು ತತ್ವಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ಒಂದಕ್ಕೊಂದು ಪೂರಕವಾದುದು. ಇದನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕು. ಅಣು ಒಡೆದಾಗ ಒಂದು ಶಕ್ತಿ ಉತ್ಪಾದನೆಯಾಗುತ್ತದೆ. ಅಣುಗಳು ಕೂಡಿದಾಗ ಇನ್ನೊಂದು ಶಕ್ತಿ ಉತ್ಪಾದನೆಯಾಗುತ್ತದೆ. ಅದುವೇ ದೊಡ್ಡ ಶಕ್ತಿ. ಹರಿಹರ ಕ್ಷೇತ್ರದಲ್ಲಿ ಕೂಡುವ ಕೆಲಸ ಆಗುತ್ತಿದೆ ಎಂದರು.
ಈಗಾಗಲೇ ರಸ್ತೆ ಅಭಿವೃದ್ಧಿಗೆ 22 ಕೋಟಿ ಬಿಡುಗಡೆ ಮಾಡಿದ್ದೇನೆ. 59 ಕಿಲೋಮೀಟರ್ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಮಂಜೂರು ನೀಡಿದ್ದೇವೆ. ನಗರೋತ್ಥಾನದಲ್ಲಿ 40 ಕೋಟಿ ರೂಪಾಯಿ ಮಂಜೂರಾಗಲಿದೆ.
ಭೈರನಪಾದ ನೀರಾವರಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು, ಅಭಿವೃದ್ಧಿ ನಿರಂತರವಾಗಿ ನಡೆಯುವ ಪ್ರಕ್ರಿಯೆ ಎಂದರು.
ಬೈರನಪಾದ ಏತ ನೀರಾವರಿ ನನೆಗುದಿಗೆ ಬಿದ್ದಿದೆ. ಅದು ಮತ್ತೆ ಚಾಲನೆಗೊಳ್ಳಬೇಕು. ಹಾಗೆಯೇ ಎಲ್ಲ ಕೈಗಾರಿಕೆಗಳು ಇಲ್ಲಿಗೆ ಬರಬೇಕು ಎಂಬುದು ನಮ್ಮ ಸರ್ಕಾರದ ಧ್ಯೇಯ, ಹರಿಹರದೊಂದಿಗೆ ಪಕ್ಕದ ರಾಣೆಬೆನ್ನೂರು ಅಭಿವೃದ್ದಿಗೂ ಆದ್ಯತೆ ನೀಡಲಾಗುವುದೆಂದರು.
ವೇದಿಕೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸಂಸದ ಜಿ.ಎಂ ಸಿದ್ದೇಶ್ವರ್,ಶಂಕರಗೌಡ ಮುನೇನಕೊಪ್ಪ, ಶಾಸಕರುಗಳಾದ ಎಸ್ ರಾಮಪ್ಪ, ಅರುಣ್ ಕುಮಾರ್, ನಗರಸಭೆ ಅಧ್ಯಕ್ಷೆ ರತ್ನಮ್ಮ ಮತ್ತಿತರರಿದ್ದರು.

 
                         
                       
                       
                       
                       
                       
                       
                      