2023 ರಿಂದ ನಂದಿಯಲ್ಲಿ ರಾಜ್ಯ ಮಟ್ಟದ “ಶಿವೋತ್ಸವ”ಕಾರ್ಯಕ್ರಮ :ಆರೋಗ್ಯ ಸಚಿವ ಡಾ.ಕೆ.ಸುಧಾಕರ್

WhatsApp Image 2022-02-24 at 2.29.04 PM

ಚಿಕ್ಕಬಳ್ಳಾಪುರ: ಮೈಸೂರು ದಸರಾ ಹಾಗೂ ಹಂಪಿ ಉತ್ಸವ ರೀತಿ ಚಿಕ್ಕಬಳ್ಳಾಪುರ ತಾಲೂಕಿನ ನಂದಿಯಲ್ಲಿ ಶಿವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದರು. ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಯ ಭೋಗ ನಂದೀಶ್ವರ ಜಾತ್ರೆ ಆಯೋಜನೆ ಕುರಿತ ಪೂರ್ವಭಾವಿ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, 2023 ರಿಂದ ನಂದಿಯಲ್ಲಿ ಶಿವರಾತ್ರಿಯಂದು ‘ಶಿವೋತ್ಸವ’ ಕಾರ್ಯಕ್ರಮವನ್ನು ರಾಜ್ಯ ಮಟ್ಟದ ಕಾರ್ಯಕ್ರಮವನ್ನಾಗಿ ಮೈಸೂರು ದಸರಾ ಹಾಗೂ ಹಂಪಿ ಉತ್ಸವದ ರೀತಿ ಆಚರಿಸಲಾಗುವುದು. ಇದಕ್ಕೆ ಪೂರ್ವ ಭಾವಿಯಾಗಿ ಈ ಸಾಲಿನಲ್ಲಿಯೂ ಹಲವು ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ವಿಜೃಂಭಣೆ ಹಾಗೂ ಭಕ್ತಿಪೂರ್ವಕವಾಗಿ ಆಚರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಮಾರ್ಚ್ 1 ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮಗಳು ಆರಂಭವಾಗಿ ರಾತ್ರಿಯಿಡೀ ನಡೆಯಲಿವೆ.

ಅಂದು ಸರಿಗಮಪ ಖ್ಯಾತಿಯ ಹೆಸರಾಂತ ಕಲಾವಿದರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೆಸರಾಂತ ಹಾಸ್ಯ ಕಲಾವಿದರಿಂದ ನಗೆ ಹಬ್ಬ ನಡೆಯಲಿದೆ. ಕೇರಳದ ಖ್ಯಾತ ಚಂಡೆ ವಾದಕರಿಂದ ವಾದನ ಕಾರ್ಯಕ್ರಮ ಇರಲಿದೆ ಜೊತೆಗೆ ಹರಿಕಥೆ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಂದಿಯಲ್ಲಿ ಮೇಳೈಸಲಿವೆ. ಇದಲ್ಲದೆ ಸ್ಥಳೀಯ ಕಲೆಗಳನ್ನು ಪ್ರೋತ್ಸಾಹಿಸಲು ಹೆಚ್ಚು ಒತ್ತು ನೀಡಿ, ಶಿವರಾತ್ರಿ ದಿನದ ಜಾಗರಣೆಯಂದು ಸ್ಥಳೀಯ ಕಲಾತಂಡಗಳಿಂದಲೂ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಎಂದಿನಂತೆ ದನಗಳ ಜಾತ್ರೆ ನಡೆಸಿ ರಾಸು ಪ್ರದರ್ಶನಕ್ಕೂ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದಲ್ಲಿ ಮಾರ್ಚ್ 1 ಮತ್ತು 2 ರಂದು ನಡೆಯುವ ಶಿವರಾತ್ರಿ ಪ್ರಯುಕ್ತ ಭೋಗ ನಂದೀಶ್ವರ ಜಾತ್ರೆಯು ಜಿಲ್ಲೆಗೆ ಮಹತ್ವದಾಗಿದ್ದು, ನಂದಿ ಎಂಬುದು ಪ್ರಾಚೀನ ದೇವಸ್ಥಾನವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದೆ. ಇಂತಹ ಐತಿಹ್ಯವುಳ್ಳ ಜಾತ್ರೆಯನ್ನು ಸಡಗರದಿಂದ ಆಚರಿಸಲು ದೇವಾಲಯಕ್ಕೆ ವಿಶೇಷ ದೀಪಾಲಂಕಾರ, ಹಣ್ಣು ಹಾಗೂ ಹೂವಿನ ಅಲಂಕಾರ ಮಾಡಲಾಗುತ್ತದೆ ಎಂದರು.

ಶಿವೋತ್ಸವ ಜಾತ್ರೆಯಲ್ಲಿ ಭಕ್ತಾಧಿಗಳಿಗಾಗಿ ಕುಡಿಯುವ ನೀರಿನ ಪೂರೈಕೆ, ಅನ್ನ ಸಂತರ್ಪಣೆ ಸೇರಿದಂತೆ ಸ್ವಚ್ಛತೆಗೆ ಯಾವುದೇ ಲೋಪವಾಗದಂತೆ ಕ್ರಮತೆಗದುಕೊಳ್ಳಬೇಕು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಜಾತ್ರಾ ಪ್ರಯುಕ್ತ ಹೆಚ್ಚಿನ ಬಸ್ ಗಳ ವ್ಯವಸ್ಥೆ ಮಾಡಬೇಕು. ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಾಗೂ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪ್ರದರ್ಶನಕ್ಕಾಗಿ ಮತ್ತು ವಿವಿಧ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸುವ ಆಹಾರೋತ್ಪನ್ನಗಳನ್ನು ಪ್ರದರ್ಶಿಸುವ ಉದ್ದೇಶಕ್ಕಾಗಿ ವಿವಿಧ ರೀತಿಯ ಮಳಿಗೆಗಳನ್ನು ತೆರೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು, ನಂದಿ ಜಾತ್ರೆಯನ್ನು ಈ ಬಾರಿ ಸುಸಜ್ಜಿತವಾಗಿ ಹಾಗೂ ಭಕ್ತಿಪೂರ್ವಕವಾಗಿ ಆಯೋಜಿಸಲು ಹಲವು ಸಮಿತಿಗಳನ್ನು ರಚಿಸಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಾರ್ಯಾಭಾರ ಹಂಚಿಕೆ ಮಾಡಿದರು. ಆಹಾರ, ಪ್ರಚಾರ, ರಿಸೆಪ್ಷನ್, ಹೂವು ಮತ್ತು ದೀಪಾಂಕಾರ, ಸನ್ಮಾನ , ಹೆಲ್ಪ್ ಡೆಸ್ಕ್ , ಸಾರಿಗೆ ವ್ಯವಸ್ಥೆ , ವೇದಿಕೆ ಸಿದ್ಧತೆಗಾಗಿ ವಿವಿಧ ಸಮಿತಿಗಳನ್ನು ರಚಿಸಿ ಸಮಿತಿಗೆ ಒಬ್ಬರನ್ನು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಮತ್ತು ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು. ಸಭೆಯಲ್ಲಿ ಫೆಬ್ರವರಿ 27 ರಂದು ನಡೆಯಲಿರುವ ಪೊಲೀಯೋ ಲಸಿಕಾಕರಣ ಸಂಬಂಧ ಕರಪತ್ರಗಳನ್ನು ಸಚಿವರು ಬಿಡುಗಡೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!